14 August 2010

ಮಾಲ್‌ಗಳೆಂಬ ಮಾಯಾವಿಗಳು ದಿನಬಳಕೆಯ ಎಲ್ಲಾ ವಸ್ತುಗಳೂ ಸ್ವಚ್ಛ ಸುಂದರ ಸುಸಜ್ಜಿತವಾದ ಒಂದೇ ಸೂರಿನಡಿಯಲ್ಲಿ ಲಭ್ಯ. ಸಾವಿರಾರು ವಾಹನಗಳಿಗೆ ಅಚ್ಚುಕಟ್ಟಾದ ಪಾರ್ಕಿಂಗ್ ಸೌಲಭ್ಯ. ಮನೋರಂಜನೆಗೆ ಐಶಾರಾಮಿ ಚಿತ್ರಮಂದಿರಗಳು, ಆಟ, ಈಜಾಟಕ್ಕೂ ಅವಕಾಶ. ಹೊಟ್ಟೆ ಹಸಿವು ತಣಿಸಲು ಬಗೆ ಬಗೆಯ ರೆಸ್ಟೋರೆಂಟ್‌ಗಳು. - ಇವೆಲ್ಲ ಕೋಟಿಗಟ್ಟಲೆ ಬಂಡವಾಳ ಹೂಡಿ ಅದರ ದುಪ್ಪಟ್ಟು ಲಾಭ ಪಡೆವ ಶಾಪಿಂಗ್ ಮಾಲ್‌ಗಳ ಕಮಾಲ್! ಕಾಸಿದ್ದವ್ರಿಗೆ ಅದುವೇ ಕೈಲಾಸ!

೨೦೦೫ರಲ್ಲಿ ಭಾರತಕ್ಕೆ ಕಾಲಿರಿಸಿದ ಮಾಲ್‌ಗಳು ೨೦೦೯ರ ವೇಳೆಗೆ ನಾಲ್ಕುನೂರಕ್ಕೂ ಮೀರಿ ಬೆಳೆದು ನಿಂತಿವೆ.
ನಮ್ಮ ಬೆಂಗಳೂರಿನಲ್ಲಿ ಏಷ್ಯಾದಲ್ಲೇ ಅತೀ ದೊಡ್ಡ ಶಾಪಿಂಗ್ ಮಾಲ್ ಇದ್ಯಂತೆ. ಅಬ್ಬ ಎಷ್ಟು ಹೆಮ್ಮೆಯಿಂದ ಹೆಳ್ಕೊಳ್ತೇವೆ ನಾವು! ಆದ್ರೆ ಈ ಮಾಲ್‌ಗಳಿಂದಾಗಿ ಅದೆಷ್ಟು ಜನರ ಹೊಟ್ಟೆಗೆ ಏಟು ಬಿದ್ದಿರ್ಬಹುದು ಅಂತ ಯೋಚ್ನೆ ಮಾಡ್ತೇವಾ? ನೂರಾರು ಕಿರಾಣಿ ಅಂಗಡಿಗಳು, ತರಕಾರಿ ಗಾಡಿಗಳು, ಪುಟ್ಟ ಪುಟ್ಟ ಹೋಟೆಲ್‌ಗಳು ವ್ಯಾಪಾರವಿಲ್ದೆ ಬಸವಳೀತಾ ಇವೆ. ಇದ್ರ ಪರೋಕ್ಷ ಹೊಡೆತ ರೈತರ ಮೇಲೂ ಆಗುತ್ತೆ, ಖಂಡಿತ. ಒಂದಷ್ಟು ಜನ್ರಿಗೆ ಉದ್ಯೋಗಾವಕಾಶವೇನೋ ಸಿಕ್ಕಿರ್ಬಹುದು. ಆದ್ರೆ ಇನ್ನುಳಿದವ್ರ ಗತಿ?!

ಬಿಡುವಿಲ್ಲದ ದುಡಿಮೆಯ ಈ ಕಾಲದಲ್ಲಿ ಜನರು ಬಯಸೋದೂ ಇಂಥದ್ದನ್ನೇ. ಎಲ್ಲವೂ ಒಂದೇ ಕಡೆ ಸಿಗೋ ವ್ಯವಸ್ಥೇನೆ ಒಳ್ಳೆದು, ಸುಮ್ನೆ ಅಲೆಯೋ ಕೆಲ್ಸ ಇಲ್ವಲ್ಲ ಅಂತ. ಮತ್ತೆ ಕೆಲವ್ರಿಗೆ ಶಾಪಿಂಗ್ ಮಾಲ್‌ಗಳಲ್ಲಿ ಶಾಪಿಂಗ್ ಮಾಡೋದು ಒಂದು ಪ್ರತಿಷ್ಠೆ. ಒಟ್ಟಿನಲ್ಲಿ ಇಂಥ ಒಂದು ಬೆಳವಣಿಗೆಗೆ ನಾವೇ ಮೂಲ ಪ್ರೇರಣೆ, ಅಲ್ವಾ?

ನಮ್ಮ ಊರಲ್ಲೆಲ್ಲ ವಾರಕ್ಕೊಮ್ಮೆ ಸಂತೆ ನಡಿಯುತ್ತೆ. ಅಲ್ಲೂ ಹೀಗೇನೇ, ದಿನಬಳಕೆಗ್ ಬೇಕಾದ್ದೆಲ್ಲ ಸಿಗುತ್ತೆ. ನ್ಯಾಯಯುತವಾದ ಬೆಲೆಗೆ, ಯಾರಿಗೂ ಏನೂ ಅನ್ಯಾಯವಾಗದ ರೀತಿಯಲ್ಲಿ. ಅದು ವಾರಕ್ಕೊಮ್ಮೆ ನಡಿಯೋದು. ಆದ್ರೆ ಇದು ಪ್ರತಿ ದಿನವೂ. ಅಲ್ಲಿ ರೈತರೇ ಅಥವಾ ಉತ್ಪಾದಕರೇ ಸ್ವತಃ ಬಂದು ತಮ್ಮ ವಸ್ತುಗಳನ್ನು ಮಾರ್ತಾರೆ. ಇಲ್ಲಿ ಕೇವಲ 'ಬ್ರಾಂಡೆಡ್' ಕಂಪೆನಿಗಳು ಮಾತ್ರ. ಎಷ್ಟು ಅಜಗಜಾಂತರ ಅಲ್ವಾ?       

ಮಾಲ್‌ಗಳನ್ನು ಮಾಡ್ಲಿ ಪರ್ವಾಗಿಲ್ಲ. ಆದ್ರೆ ಅಲ್ಲಿ ನಮ್ಮವರಿಗೇನೆ ಅವಕಾಶ ಕೊಡ್ಬೇಕು. ದೊಡ್ಡ ದೊಡ್ಡ ವಿದೇಶಿ ಕಂಪೆನಿಗಳನ್ನು ಕಡಿಮೆ ಮಾಡಿ, ಹೊರಗಡೆ ಸಣ್ಣ ಪುಟ್ಟ ವ್ಯಾಪಾರ ಮಾಡುವ ನಮ್ಮವರನ್ನೇ ಒಳಕರೀಬೇಕು.. ಹಾಗಾದಾಗ ಆ ಅಭಿವೃದ್ಧಿಗೂ ಒಂದು ಅರ್ಥ ಬರುತ್ತೆ. ಏನಂತೀರಿ?