25 October 2011

ಈ ಅಬ್ಬರ ಬೇಕೆ?



ಪಕ್ಕದ ಮನೆಯ ಪುಟಾಣಿ ಹುಡುಗನಿಗೆ ಎರಡು ದಿನಗಳಿಂದ ಖುಷಿಯೋ ಖುಷಿ. ಕಾರಣ, ಅವನ ಮನದಿಚ್ಛೆಯ ಪಟಾಕಿಗಳು ಇಂದವನ ಕೈಸೇರಿವೆ. ಉಪವಾಸ ಸತ್ಯಾಗ್ರಹಾದಿಗಳು ರಾಷ್ಟ್ರಮಟ್ಟದ ರಾಜಕಾರಣಿಗಳ ಮೇಲೆ ಪ್ರಭಾವ ಬೀರದಿದ್ದರೂ ತನ್ನ ಮನೆಯಲ್ಲಿ ಖಂಡಿತಾ ಪರಿಣಾಮಕಾರಿಯಾಗುತ್ತದೆಂಬ ಅವನ ಅಚಲ ನಂಬಿಕೆ ಇಂದು ಮತ್ತಷ್ಟು ಗಟ್ಟಿಯಾಗಿತ್ತು. ನಾಕು ದಿನಗಳಿಂದ ಹಿಡಿದ ಹಟ ಸಾರ್ಥಕವಾಗಿತ್ತು. ರಂಗು ರಂಗಿನ ಢಂ ಢಮಾರೆನ್ನುವ ಹತ್ತು ಹಲವು ಬಗೆಯ ಪಟಾಕಿಗಳು ಪುಟ್ಟ ಕೈಯಿಂದ ಬೆಂಕಿ ಕಾಣುವ ತವಕದಿ ಕಾದು ಕುಳಿತಿವೆ.

ಹಬ್ಬಗಳ ರಾಜ ಬಂದನೆಂದಾಗ, ದೀಪಗಳಷ್ಟೇ ಗಾಢವಾಗಿ ಪಟಾಕಿಗಳ ಅಬ್ಬರವೂ ನೆನಪಾಗುತ್ತದೆ. ಮಕ್ಕಳಿಗಂತೂ ದೀಪಾವಳಿಯೆಂದರೆ ಅದು 'ಪಟಾಕಿ' ಅಷ್ಟೇ ಎಂಬ ಭಾವನೆ ಬೇರೂರುವಂತಾಗಿದೆ. ಕಾರಣ ಮತ್ಯಾರೂ ಅಲ್ಲ, ನಾವೇ. ಮಗುವಿಗಿನ್ನೂ ಮಾತು ಬರುವ ಮೊದಲೇ ಪಟಾಕಿಯ ಸದ್ದು ಪರಿಚಿತವಾಗುವಂತೆ ಮಾಡುತ್ತೇವೆ ನಾವು. ಅದು ಬೆಳೆದಂತೆ ಪಟಾಕಿಗಾಗಿ ಹಟ ಮಾಡುತ್ತದೆ. ಅದರಿಂದಾಗಬಹುದಾದ ಅನಾಹುತಗಳ ಬಗ್ಗೆ ವಿವೇಚಿಸುವಷ್ಟು ದೊಡ್ಡ ಮನಸ್ಸೇನೂ ಅದರದಾಗಿರುವುದಿಲ್ಲ ತಾನೆ?
ಮಕ್ಕಳಿಗೆ ಹಬ್ಬದ ಮಹತ್ವ, ಹಿನ್ನೆಲೆ ಇತ್ಯಾದಿಗಳನ್ನು ವಿವರಿಸುವ ಬದಲು, ಹಣವನ್ನೇ ಸುಡುವುದನ್ನು ಹೇಳಿಕೊಡುತ್ತೇವೆ. ಲಕ್ಷ್ಮಿ ಪೂಜೆ ಮಾಡಿಯಾದರೂ ಏನು ಪ್ರಯೋಜನ ಹೇಳಿ?
ಪ್ರತಿ ವರ್ಷ ಪಟಾಕಿ ಸಿಡಿತದಿಂದಾಗಿ ಗಾಯಗೊಂಡವರ, ಕಣ್ಣು-ಕೈ-ಕಾಲು ಕಳಕೊಂಡವರ ಆಕ್ರಂದನ ಹೆಚ್ಚಾಗುತ್ತಲೆ ಇದೆಯಷ್ಟೆ. ಕೆಟ್ಟ ಮೇಲೂ ಬುದ್ಧಿ ಕಲಿವ ಬುದ್ಧಿಯೂ ನಮಗಿಲ್ಲದಾಗಿಹೋದ್ದು ವಿಪರ್ಯಾಸ..!  

3 comments:

  1. ನಿಜ..
    ನಮ್ಮಲ್ಲಿ ಪಟಕಿ ನಿಲ್ಲಿಸಿ ೧೦-೧೨ ವರ್ಷ ಮೇಲಾಯಿತು.. ಈಗೇನಿದ್ದರೂ ದೀಪಾವಳಿ ಅಷ್ಟೆ.. ಪಠಕಾವಳಿ ಅಲ್ಲ...

    ಲೇಖನ ನಿಜಕ್ಕೂ ಖುಶಿಯಾಯಿತು:)
    blog ಮತ್ತೊಮ್ಮೆ ಶುರುವಾದ್ದಕ್ಕೆ ಸಂತಸ.
    ಹೀಗೇ ಬರೆಯುತ್ತಿರಿ:)

    ReplyDelete
  2. ಅನುಶ್ರೀ,
    ನಿಮ್ಮ ಬರಹಗಳನ್ನು ಓದಿ ಖುಷಿಯಾಯ್ತು. ಬರೆಯುವುದನ್ನು ನಿಲ್ಲಿಸಿದ ಹಾಗೆ ಕಾಣುತ್ತೆ-ಏಕೆ?! ಬರೀರಿ ನಿರಂತರ. ನಿಮ್ಮ ಬ್ಲಾಗಿನ ಬರಹವೊಂದರ ತುಣುಕನ್ನು ನಮ್ಮ ಪತ್ರಿಕೆಯಲ್ಲಿ ಬಳಸಿಕೊಳ್ಳುತ್ತಿದ್ದೇನೆ-ನಿಮ್ಮ ಅನುಮತಿ ಇದೆ ಎಂದುಕೊಂಡು...ನಾಳೆಯ (ನವೆಂಬರ್ 4) ವಿಜಯ ಕರ್ನಾಟಕ ದೈನಿಕದ ಸಂಪಾದಕೀಯ ಪುಟ ನೋಡಿ.

    ಪ್ರೀತಿಯಿಂದ,

    ಸಹ್ಯಾದ್ರಿ ನಾಗರಾಜ್
    (ವಿಜಯ ಕರ್ನಾಟಕ ದೈನಿಕ: sahyadri.nagaraj@gmail.com, 8722631300)

    ReplyDelete
    Replies
    1. ನಮಸ್ತೆ ಸರ್.
      ನಿಮ್ಮ ಪ್ರೋತ್ಸಾಹಕ್ಕೆ ಅನಂತಾನಂತ ಧನ್ಯವಾದಗಳು.
      ಈ ನಡುವೆ ಬರವಣಿಗೆ ಸ್ವಲ್ಪ ನಿಂತಿತ್ತು. ಈಗ ಮತ್ತೆ ಪ್ರಾರಂಭಿಸಿದ್ದೇನೆ, ಇನ್ನು ನಿಲ್ಲದೆಂಬ ನಂಬಿಕೆಯಲ್ಲಿ.
      ಮತ್ತೊಮ್ಮೆ ತಮಗೆ ಧನ್ಯವಾದಗಳು.
      ಅನು’ಸ್ವರ’ಕ್ಕೆ ಹೀಗೇ ಕಿವಿಯಾಗುತ್ತಿರಿ.

      Delete