03 May 2010

ಸದ್ದಿಲ್ಲದೆ ಸಾಗುತಿದೆ ಮತ್ತೊಂದು ಆಕ್ರಮಣಪಥ...



ಸುಮಾರು ಹತ್ತು ದಿನಗಳ ಹಿಂದೆ ಪತ್ರಿಕೆಯೊಂದರ ಅಂಕಣಬರಹವೊಂದರಲ್ಲಿ (vk,22 April,'ನೂರೆಂಟು ಮಾತು') ಇಂಥದೊಂದು ಮಾಹಿತಿ ಓದಿ ನಿಜಕ್ಕೂ ದಂಗಾಗಿ ಹೋಯ್ತು.ಈ ವಿಚಾರ ಕೇಳಿದ್ರೆ ನಿಮ್ಗೂ ಆಶ್ಚರ್ಯವಾದೀತು.
ಇಡೀ ವಿಶ್ವವನ್ನು ಆವರಿಸಿರುವ 'ಚೀನಾದ ಪರಿಣಾಮ'ದ ಕುರಿತಾದ ಲೇಖನ ಅದು. "ಅಮೇರಿಕ,ಯುರೋಪ್,ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ಯಾವುದೇ ದೇಶಗಳಿಗೆ ಹೋದ್ರೂ Made in china ಸಾಮನುಗಳದ್ದೇ ಕಾರುಬಾರು. ಗಮನಿಸ್ಬೇಕಾದ ಪ್ರಮುಖ ಸಂಗತಿ ಅಂದ್ರೆ ಭಾರತದ ಎಲ್ಲ ಹಳ್ಳಿ, ಮನೆಗಳನ್ನೂ ಈ Made in china ಸಾಮಾನುಗಳು ಮುಟ್ಟಿವೆ. ಮುಂದಿನ ಹತ್ತು ವರ್ಷಗಳಲ್ಲಿ ಗುಂಡುಸೂಜಿ, ಬಟನ್, ಸಾಕ್ಸ್, ಪೆನ್, ಮಗ್, ರೇಜರ್, ಬ್ಲೇಡ್, ಬಕೆಟ್‌ನಿಂದ ಹಿಡಿದು ನಾವು ಉಪಯೋಗಿಸುವ ಶೇ.65ರಷ್ಟು ವಸ್ತುಗಳು ಚೀನದಲ್ಲಿಯೇ ಉತ್ಪಾದನೆಯಗಲಿದೆ! ಇಷ್ಟೇ ಆಗಿದ್ರೆ ok.ಆದ್ರೆ ನಾವು ನಿತ್ಯ ಪೂಜಿಸೋ ದೇವರ ವಿಗ್ರಹ,ದೇವರ ಫೋಟೋ,ಕುಂಕುಮ,ಅರಿಶಿನ,ದೇವರ ಫೋಟೋಫ್ರೇಮ್,ಗಂಧದ ಮಾಲೆ, ಪ್ಲಾಸ್ಟಿಕ್ ಹೂವು,ಗಂಧ ತೇಯುವ ಕಲ್ಲೂ ಸೇರಿದಂತೆ ಪೂಜಾ ಸಾಮಗ್ರಿಗಳು ಭಾರತಕ್ಕೆ ಚೀನಾದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬರ್ತಾ ಇವೆಯಂತೆ!

ಅಂಕಿ-ಸಂಖ್ಯೆಗಳ ವಿವರದಲ್ಲಿ ಹೇಳೋದಾದ್ರೆ:
ಕಳೆದ ವರ್ಷ ಚೀನಾದ ಯಿವು ಎಂಬ ನಗರದಲ್ಲಿ ತಯಾರಾದ ಎಂಟು ಕೋಟಿ ವಿವಿಧ ಬಗೆಯ ಗಣೇಶನ ವಿಗ್ರಹಗಳು ಭಾರತಕ್ಕೆ ರಫ್ತಾಗಿದೆ.
ಸುಮಾರು ಎರಡು ಕೋಟಿ ಕೃಷ್ಣ,ಹನುಮಂತ,ತಿರುಪತಿ ವೆಂಕಟೇಶ,ಪದ್ಮನಾಭ,ಶಬರಿಮಲೆ ಅಯ್ಯಪ್ಪ ವಿಗ್ರಹಗಳು ಯಿವು ನಗರದಿಂದ ಬಂದಂಥವು.
ನಾವು ಪೂಜಿಸುವ ಈ ವಿಗ್ರಹಗಳ ಪೈಕಿ ಶೇ.55ರಷ್ಟು ಚೀನಾದಲ್ಲಿ ತಯಾರಾದವು!
ಈ ವರ್ಷವೊಂದರಲ್ಲಿಯೇ ಚೀನಾ ಹನ್ನೆರಡು ದಶಲಕ್ಷ ಟನ್ ಕುಂಕುಮವನ್ನು ಭಾರತಕ್ಕೆ ರಫ್ತು ಮಾಡಲಿದೆ.ಈ ಕುಂಕುಮ ಭಾರತದಲ್ಲಿ ಸಿಗುವುದಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆಯೆಂಬುದನ್ನು ಗಮನಿಸ್ಬೇಕು.
ಕಳೆದ ಮೂರು ವರ್ಷಗಳಲ್ಲಿ ಚೀನಾ ಭಾರತಕ್ಕೆ ಕಳಿಸಿದ ಕರ್ಪೂರ ನಲುವತ್ತೊಂದು ಲಕ್ಷ ಟನ್!
ಈ ವರ್ಷ ಚೀನಾ,ಕನ್ನಡವೂ ಸೇರಿದಂತೆ ಭಾರತದ ಎಲ್ಲ್ಲಾ ಭಾಷೆಗಳಲ್ಲಿ ಮುದ್ರಿಸಿದ ಸುಮಾರು ಮುನ್ನೂರು ಪುಟಗಳನ್ನು ಒಳಗೊಂಡ ನಾಲ್ಕು ಕೋಟಿ 'ಭಗವದ್ಗೀತೆ'ಯ ಪ್ರತಿಗಳನ್ನು ನಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದ್ಯಂತೆ!


ಇದು ಹೀಗೇ ಮುಂದುವರಿದ್ರೆ ಇನ್ನು ಒಂದೆರಡು ವರ್ಷಗಳಲ್ಲಿ ಭಾರತದ ಎಲ್ಲ ದೇಗುಲಗಳಲ್ಲಿನ, ಎಲ್ಲರ ಮನೆ ಪೂಜಾಕೋಣೆಯಲ್ಲಿನ ವಸ್ತುಗಳೆಲ್ಲ Made in China ಆಗೋದು ಖಚಿತ."

"ಅಬ್ಬ ಚೀನಾದ ಸಾಧನೆಯೇ!" ಅಂತ ನಾವು ಮೂಗುಮುರಿದು ಬೆರಗಾಗಿ ಕಣ್‌ಕಣ್ ಬಿಡೋ ಹೊತ್ಗೆ ಚೀನಾ ನಮ್ಮ ಜೀವನದ ಮೂಲವನ್ನು ಅಲುಗಾಡಿಸಿಬಿಟ್ಟಿರುತ್ತೆ. ಖಂಡಿತ ನಾವು ಈಗ ಎಚ್ಚೆತ್ಕೊಳ್ಳೇಬೇಕು. ಇಷ್ಟೊಂದು ದೊಡ್ಡಮಟ್ಟಿನ ವಹಿವಾಟು ಚೀನಾಕ್ಕೆ ಸಿಗ್ಬೇಕಾದ್ರೆ ಅದ್ಕೆ ನಮ್ಮವ್ರೇ ಕಾರಣ ತಾನೆ..? ನಾವು order ಕೊಟ್ರೇನೆ ತಾನೆ ಅವ್ರು ಮಾಡೋದು.. 2020ರ ಹೊತ್ಗೆ ಭಾರತ ನಂಬರ್ ವನ್ ಆಗುತ್ತೇಂತ ಕನಸು ಕಾಣ್ತಾ, ಹಾಯಾಗಿ ನಿದ್ದೆ ಮಾಡ್ತಾ ಇದ್ರೆ 'ವ್ಯಾಪಾರಿ ಆಕ್ರಮಣ'ಗಳು ನಮ್ಮ ಅಂತಃಸ್ಸತ್ವವನ್ನೇ ಕರಗಿಸಿಬಿಡುತ್ವೆ. ನಮ್ಮಲ್ಲಿನ ಸ್ವ-ಉದ್ಯೋಗ, ಗುಡಿಕೈಗಾರಿಕೆಗಳು ಹೇಳಹೆಸರಿಲ್ಲದಂತೆ ಮಾಯವಾಗಿ ಬಿಡುತ್ವೆ. ಮತ್ತೊಮ್ಮೆ ದಾಸ್ಯದ ಬಲೆಗೆ ಸಿಲುಕಿಕೊಳ್ಳೋ ಮೊದ್ಲು ಜಾಗೃತರಾಗೋಣ. ಜಾಗೃತರಾಗ್ಲೇಬೇಕು.. ಅಲ್ವ..?

02 March 2010

ತಪ್ಪು ಯಾರದ್ದು. . .??



ಸ್ನೇಹಿತ್ರೆ, ಕಳ್ದ ಕೆಲವು ತಿಂಗಳುಗಳಿಂದ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಒಂದು so called 'ರಿಯಾಲಿಟಿ ಶೋ'ದ ಬಗ್ಗೆ ಹೇಳಲೇಬೇಕನಿಸ್ತು.  ಮೇಲ್ನೋಟಕ್ಕೆ ಅದೊಂದು ಉತ್ತಮ ಕೌನ್ಸಿಲಿಂಗ್ ಕಾರ್ಯಕ್ರಮದ ಹಾಗೆ ಭಾಸವಾಗುತ್ತೆ.  ಅಥವ ಆ ರೀತಿ ಭಾಸವಾಗುವಂತೆ ತೋರ್ಪಡಿಸ್ತಾರೆ.  ಅವರು ಹೇಳೋ ಪ್ರಕಾರ ಅವರ ಉದ್ದೇಶ ನೊಂದ ಮನಗಳಿಗೆ ಸಾಂತ್ವನ ಹೇಳೋದು, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸೋದು, ಮನಸ್ತಾಪಗಳನ್ನು ದೂರೈಸಿ ನೆಮ್ಮದಿ ನೀಡೋದು ಇತ್ಯಾದಿ
ಇತ್ಯಾದಿ...  ಈ ಬಣ್ಣದ ಮಾತುಗಳಿಗೆ ಮರುಳಾಗಿ ಹಲವಾರು ಜನ, ನಮ್ಮ ಸಮಸ್ಯೆಗಳೂ ಬಗೆಹರಿದಾವು ಎಂಬ ಆಶಾಭಾವದಿಂದ ಈ ಚಾನೆಲ್ ಗಳ ಮೊರೆಹೋಗ್ತಾರೆ.      

ಆದರೆ ಅವರು ಮಾಡೋದೇನು....?  ಸಂಸಾರದ ನಾಲ್ಕು ಗೋಡೆಗಳ ಮಧ್ಯೆಯೇ ಬಗೆಹರಿಯಬೇಕಾದಂಥ ಸಮಸ್ಯೆಗಳನ್ನು ಜಗಜ್ಜಾಹೀರು ಮಾಡಿ, ವೀಕ್ಷಕರ ಹತ್ರ "ಇಲ್ಲಿ ತಪ್ಪು ಯಾರದ್ದು..?" ಅಂತ ಕೇಳ್ತಾರೆ.  ಇಲ್ಲಿ ತಪ್ಪು ಮತ್ತ್ಯಾರದ್ದೂ ಅಲ್ಲ, ಆ ಚಾನೆಲ್ ನವರದ್ದೇ.  ಗಂಡ-ಹೆಂಡತಿ, ಅತ್ತೆ-ಸೊಸೆ, ಅಣ್ಣ-ತಮ್ಮ, ತಂದೆ-ಮಗ ಕಚ್ಚಾಡುವುದನ್ನೇ ಒಂದು 'ಕಾರ್ಯಕ್ರಮ' ಅಂತ ಮಾಡಿ ತೋರಿಸ್ತಾರಲ್ಲ ಏನೆನ್ನಬೇಕು ಇದಕ್ಕೆ....ಕೊನೆಗೆ ಅವರಿಗೆ ತಾವೇ ಸಾಂತ್ವನ ಹೇಳಿ, ಅವರ ಸಮಸ್ಯೆಯನ್ನು ತಾವೇ ಬಗೆಹರಿಸಿದ್ದೇವೇಂತ ಪೋಸು ಕೊಡ್ತಾರೆ.  ಸಮಸ್ಯೆ ಬಗೆಹರಿಸುವ ಒಳ್ಳೆ ಮನಸ್ಸು ಇದ್ರೆ, ಅವರ ಸ್ಟುಡಿಯೊದೊಳ್ಗಡೆನೇ ಒಂದು ಕೌನ್ಸಿಲಿಂಗ್ ಮಾಡಿ, ಮನಸ್ತಾಪ ಪರಿಹರಿಸ್ಬಹುದಲ್ಲ... ಅದನ್ನು ಚಿತ್ರೀಕರಿಸಿ ಊರೆಲ್ಲ ಪ್ರಚಾರ ಮಾಡೋ ಅಗತ್ಯ ಇದ್ಯಾ?  ಈ ರೀತಿ ಮಾಡೋದ್ರಿಂದ ಆ ಸಂಸಾರದ ಮಾನ, ಮರ್ಯಾದೆ ಬೀದಿಪಾಲಾಗುತ್ತೆ ಅನ್ನುವ ಕನಿಷ್ಟ ಜ್ಞಾನ ಕೂಡ ಇವ್ರಿಗೆ ಇಲ್ವ...?!  ಮುಂದೆ ಅವರು ಸರಿಯಾಗಿ ಬದುಕಲು ಪ್ರಾರಂಭಿಸಿದರೂ ಸುತ್ತಲಿನ ಸಮಾಜ ಅವರನ್ನು ಯಾವ ದೃಷ್ಟಿಯಲ್ಲಿ ನೋಡೀತು...?  ಪ್ರತಿಬಾರಿಯೂ ಬೊಟ್ಟುಮಾಡಿ ತೋರಿಸಿ ನಗುವ ಜನರ ಮಧ್ಯೆ ಅವರ ಜೀವನ ಇನ್ನಷ್ಟು ನರಕಸದೃಶವಾಗೊಲ್ವೆ...?

ಮಾಧ್ಯಮಗಳು ಯಾವಾಗಲೂ ಜನಪರ ಕಾರ್ಯಕ್ರಮಗಳಿಗೆ, ಸಮಾಜದ ಏಳಿಗೆಗೆ ಒತ್ತುಕೊಡುವಂಥ ಕಾರ್ಯಕ್ರಮಗಳಿಗೆ ಮನ್ನಣೆ ನೀಡಬೇಕಲ್ಲ... ಟಿ.ಆರ್.ಪಿ ಗಿಟ್ಟಿಸುವ ಭರದಲ್ಲಿ ಜನಜೀವನಕ್ಕೆ ಮುಳುವಾಗುವಂಥ ಕಾರ್ಯಕ್ರಮಗಳನ್ನು ಹುಟ್ಟುಹಾಕೋದು ಎಷ್ಟು ಸರಿ...?

ಗುರುತು ಪರಿಚಯವೇ ಇಲ್ಲದ ನಮ್ಮನ್ನುಳಿಸೋದಕ್ಕಾಗಿ ಸಾವಿರಾರು ಯೋಧರು ಹಗಲಿರುಳು ಹೊಣೆಯುತ್ತಿದ್ದಾರೆ, ಹಿಮಪಾತಕ್ಕೆ ಬಲಿಯಾಗ್ತಿದಾರೆ.  ಅವರ ಕಷ್ಟ, ನೋವುಗಳು, ಅವರ ಕುಟುಂಬದ ಪರಿಸ್ಥಿತಿ ಇತ್ಯಾದಿಗಳ ಬಗ್ಗೆ ಯಾರೂ ಯೋಚಿಸೋದೇ ಇಲ್ಲ.  ಆ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಮಾಡಿದರೆ ಅಷ್ಟಾದ್ರೂ ಪುಣ್ಯ ಬಂದೀತು.  ಉಂಡು ಮಲಗುವಲ್ಲಿಗೆ ಮುಗಿಯಬೇಕಾದ ಗಂಡಹೆಂಡಿರ ಜಗಳಕ್ಕೆ ರಂಗುರಂಗಿನ ಕಥೆಕಟ್ಟಿ ಜಗಜ್ಜಾಹೀರು ಮಾಡುವ ಬದಲು ದೇಶದೇಳಿಗೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಮಾಡಬಾರದೇಕೆ?

ಮೊದಲು ಇಂಥ ಕಾರ್ಯಕ್ರಮಗಳಿಗೆ ಕುಮ್ಮಕ್ಕು ನೀಡುವ ನಾವು ಎಚ್ಚೆತ್ಕೊಬೇಕು.  ಟೀವಿಯಲ್ಲಿ ಕಾಣಿಸಿಕೊಳ್ಳಬೇಕನ್ನೊ ಹುಚ್ಚುಆಸೆಯ ಬಿರುಗಾಳಿಗೆ ಸಂಸಾರ ನೌಕೆ ಬಲಿಯಾಗದಂತೆ ನೋಡಿಕೊಳ್ಬೇಕು. ಇಂಥ ಕಾರ್ಯಕ್ರಮಗಳ ವಿರುದ್ಧ ಒಕ್ಕೊರಲ ಹೋರಾಟ ನಡೀಬೇಕು.  ಅವರವರೊಳಗೆ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಗಳಿಗೆ ಬಹಿರಂಗ ಪ್ರಚಾರ ನೀಡಿ, ಅದನ್ನು ಮತ್ತಷ್ಟು ಉಲ್ಬಣಗೊಳಿಸುವ ಕಾರ್ಯಕ್ರಮಗಳಿಗೆ ಬಹಿಷ್ಕಾರವಿರ್ಲಿ.
ಏನಂತೀರಿ..?

16 February 2010

ಜೀವವೆಂಬುಡುಗೊರೆ....



ನಾವೆಲ್ಲ ನಮ್ ಸ್ನೇಹಿತ್ರು, ಬಂಧುಗಳು, ಆತ್ಮೀಯರು ಕೊಟ್ಟ ಉಡುಗೊರೆಗಳನ್ನು ಎಷ್ಟು ಜೋಪಾನವಾಗಿ ಎತ್ತಿಡ್ತೇವೆ! ಅವರೊಂದಿಗಿನ ಸವಿಸವಿನೆನಪುಗಳು ಆ ವಸ್ತುಗಳಿಗೊಂದು ವಿಶೇಷ ಸ್ಥಾನ ನೀಡಿರ್ತವೆ. ಕೆಲವನ್ನಂತೂ ತೀರಾ ಹಚ್ಕೊಂಡಿರ್ತೇವೆ. ಅದು ಎಲ್ಲಾದ್ರೂ ಕಳೆದು ಹೋದ್ರೆ ಏನೋ ಒಂಥರಾ ಕಸಿವಿಸಿ, ಚಡಪಡಿಕೆ. ಛೆ ಕಳ್ಕೊಂಡುಬಿಟ್ನಲ್ಲಾ ಅಂತ ಬೇಜಾರು. ಆ ವಸ್ತುವಿಗೆ ಅಂಥಾ ಬೆಲೆಯೇನೂ ಇಲ್ದಿದ್ರೂ ಅದು ಬೆಲೆಕಟ್ಟಲಾಗದ್ದಾಗಿರುತ್ತೆ. ನಿಜಾರ್ಥದಲ್ಲಿ ನೋಡಿದ್ರೆ ಅದೊಂದು ಕ್ಷುಲ್ಲಕ ವಿಚಾರ. ಆದ್ರೆ ಅಷ್ಟಕ್ಕೇ ಎಷ್ಟು ತಲೆಕೆಡಿಸಿಕೊಂಡುಬಿಡ್ತೇವಲ್ಲ...

ಸ್ನೇಹಿತ್ರೆ, ಲಕ್ಷ ಲಕ್ಷ ಜೀವಕೋಶಗಳ ವಿಶಿಷ್ಟ ಸಂಯೋಜನೆಯ ಈ ನಮ್ಮ ದೇಹ, ಅದರೊಳಗಿನ 'ಜೀವ' ನಿಜಕ್ಕೂ ನಮ್ಗೆ ದೊರೆತ ಅತ್ಯಂತ ದೊಡ್ಡ ಉಡುಗೊರೆ ಅಲ್ವಾ... ಅಗೋಚರ, ಅದ್ಭುತ ಶಕ್ತಿಯಿತ್ತ ಅತ್ಯದ್ಭುತ ಉಡುಗೊರೆಯಿದು. ಜೀವವೇ ಇಲ್ಲದ ಸಣ್ಣ ಸಣ್ಣ ವಸ್ತುಗಳ ಬಗ್ಗೆ ನಾವು ಅಷ್ಟು ಕಾಳಜಿ ತೋರಿಸ್ತೇವಂದ್ರೆ ಈ 'ಜೀವ'ಕ್ಕೆ ಇನ್ನೆಷ್ಟು ತೋರಿಸ್ಬೇಡ... ಯಾವುದೋ ಒಂದು ಹಂತದಲ್ಲಿ  ಏನೋ ಒಂದು ಹತಾಶೆಗೆ, ದುಃಖಕ್ಕೆ ನೊಂದುಕೊಂಡು ಜೀವವನ್ನೇ ಕಳ್ಕೊಳ್ಳೋದು ಎಷ್ಟು ಸರಿ..? ಕಳೆದುಹೋದ ವಸ್ತುಗಳು ಮತ್ತೆ ಸಿಕ್ಕೀತು... ಅಥವಾ ಅಂಥದ್ದೇ ಇನ್ನೊಂದನ್ನು, ಕೊಟ್ಟವರಿಂದ್ಲೇ ಮತ್ತೆ ಪಡೀಬಹುದು. ಆದ್ರೆ ಈ ಜೀವ, ಜೀವನ.... ಊಹೂಂ ಖಂಡಿತ ಮತ್ತೆ ಬರೊಲ್ಲ...

ಪರೀಕ್ಷೆಯಲ್ಲಿ ಫೇಲಾದೆ, ನನ್ನ ಆತ್ಮೀಯರು ನನ್ನ ತೊರೆದ್ರು, ನಂಗೆ ಬೇಕಾದ್ದು ಸಿಗ್ಲಿಲ್ಲ, ನಂಗೆ ಯಾರೋ ಬೈದ್ರು, ಯಾವುದೋ ಒಂದು ಕೆಲ್ಸ ಹೋಯ್ತು, ಅವಮಾನ ಆಯ್ತು - ಹೀಗೆ ಇಂಥ ಸಣ್ಣಪುಟ್ಟ ವಿಚಾರಗಳಿಗೆ ಜೀವಕ್ಕೇ ಎರವನ್ನು ತಂದುಕೊಳ್ಳೋದು ಸರೀನಾ... ಛೆ, ನಮ್ಮ ಈ 'ಜೀವ' ಅಷ್ಟು cheap ಆಗ್ಬಿಡ್ತಾ...? ಇಷ್ಟು ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡ್ಕೊಳ್ಳೋದಂದ್ರೆ ಈ ಆತ್ಮಕ್ಕೆ, ಈ ಜೀವಕ್ಕೆ ಏನೇನೂ ಬೆಲೆ ಇಲ್ಲ ಅಂದ ಹಾಗಾಯ್ತಲ್ಲ...

"ಸಾಕಾಗಿ ಹೋಯ್ತು...ಈ ಜೀವನವೇ ಬೇಡ" ಅಂತನ್ನಿಸೋ ಕ್ಷಣಗಳು ನೂರಾರು ಬರ್ಬಹುದು. ಆದ್ರೆ ಅದು ಕ್ಷಣಿಕ ಮಾತ್ರ. ಮರುದಿನ ಮತ್ತೊಂದು ಜೀವನಪ್ರೀತಿ ಮೊಳಕೆ ಒಡೆಯುತ್ತೆ. ಅಲ್ಲಿವರೆಗೆ ಜೀವಹಿಡಿದು ಕೂತ್ರೆ ಅಷ್ಟು ಸಾಕು. ಆಮೇಲೆ, "ಛೆ, ಎಂಥಾ ಕೆಟ್ಟ ಯೋಚ್ನೆ ಮಾಡಿದ್ದೆ.." ಅಂತನ್ನಿಸುತ್ತೆ.

ಯೋಚ್ನೆ ಮಾಡಿ, ನಿಮ್ಮವರನ್ನೂ ಯೋಚ್ನೆಗೆ ಹಚ್ಚಿ. ಬೇರೆ ಯಾವ ಪ್ರಾಣಿಗೂ ಸಿಕ್ಕದ ಅತಿಶ್ರೇಷ್ಠ ಉಡುಗೊರೆ ನಮ್ಗೆ ಸಿಕ್ಕಿದೆ. ಇರುವವರೆಗೆ, ಗಮ್ಯ ಕರೆವವರೆಗೆ ಅದನ್ನು ಕಾಪಾಡಿಕೊಂಡು, ಅದಕ್ಕೆ ನಾವೇ ಎರವಾಗದ ಹಾಗೆ 'ಜೀವಿಸು'ವುದು ಖಂಡಿತವಾಗಿ ನಮ್ಮ ಕರ್ತವ್ಯ. ಅಲ್ವ...

03 February 2010

ನಿಲ್ಲು ಸೋದರಿ...ಇಲ್ಲೊಮ್ಮೆ ಕೇಳು

[ಲವ್ ಜಿಹಾದೆಂಬ ಮಾಯಾವಿಯ ಹಿಂದೆ ಓಡಿಹೋಗುವ ಮುನ್ನ...]



 ಒಂಭತ್ತು ತಿಂಗಳು ಬಂದೆಲ್ಲ ನೋವನ್ನು ನುಂಗಿಕೊಂಡು, ತನ್ನ ಹೊಟ್ಟೆಯೊಳಗೆ ನಾಜೂಕಾಗಿ ನಿನ್ನ ರಕ್ಷಿಸಿ, ಮತ್ತೊಂದಷ್ಟು ನೋವನನುಭವಿಸಿ ಜನ್ಮನೀಡಿದಳು ಅಮ್ಮ. ಮತ್ತೆ ಮತ್ತಷ್ಟು ಪ್ರೀತಿ ವಾತ್ಸಲ್ಯದಿಂದೊಡಗೂಡಿದ ಸಮೃದ್ಧ ಪೋಷಣೆ ನೀಡಿ ಪಾಲಿಸಿದಳು ಅಮ್ಮ. ಅಷ್ಟೇ ಮಮತೆಯಿಂದ ಬೇಕಾದ್ದೆಲ್ಲ ತಂದುಕೊಟ್ಟು ಮಗಳು ಖುಷಿಯಾಗಿರ್ಲಿ ಅಂತ ನೋಡಿಕೊಂಡರು ಅಪ್ಪ. ಮಗಳು ತುಂಬಾ ಓದ್ಬೇಕು, ಸಮಾಜದಲ್ಲಿ ಒಳ್ಳೆ ಸ್ಥಾನ ಪಡೀಬೇಕು, ಸದಾ ಸಂತೋಷವಾಗಿರ್ಬೇಕು ಅಂತ ತಮ್ಮ ಜೀವ-ಜೀವನ ತೇದು ವಿದ್ಯೆ-ಬುದ್ಧಿ ನೀಡಿ ಬೆಳೆಸಿದ್ರು ಅದೇ ಅಪ್ಪ-ಅಮ್ಮ. ಇನ್ನೇನು ತಮ್ಮ ಶ್ರಮ ಸಾರ್ಥಕವಾಗ್ಬೇಕು, ಮಗಳಿಗೊಂದು ಉತ್ತಮ ಜೀವನ ರೂಪಿಸಿಕೊಡ್ಬೇಕು ಅಂತ ಹೊರಡ್ತಾ ಇರೋವಾಗ ಇದೆಂಥಾ ಬರಸಿಡಿಲು ಆ ಬಡಪಾಯಿಗಳ ಮೇಲೆ! ಈ ಅನುಬಂಧಗಳನ್ನೆಲ್ಲ ಕಡಿದುಕೊಂಡು ಅದ್ಯಾರೋ ಗೊತ್ತು ಗುರಿಯಿಲ್ಲದವನ ಹಿಂದೆ ನೀನು ಓಡಿಹೋದೆ ಅಂತ ಕೇಳಿದ್ರೆ ಆ ಹೃದಯಗಳಿಗೆ ಏನಾಗ್ಬೇಡ... ಅದೂ ಅಶಿಸ್ತಿನ ಪರಮಾವಧಿಯ, ನೀಚ, ತುಚ್ಛ, ಕಟುಕ, ಕೊಳಕು ಜನದ ಹಿಂದೆ... ಛಿ, ನಾಚಿಕೆಯಾಗೊಲ್ವ... ಎಲ್ಲಿ ಹೋಯ್ತು ನಮ್ಮ ಸಂಸ್ಕಾರ, ಸಂಸ್ಕೃತಿಯ ಪಾಠ? ಅದ್ಯಾವ ಅನಾಮಿಕ ಆಮಿಷ ನಿನ್ನ ಮನಸ್ಸನ್ನು ಸೆಳೆದುಕೊಂಡಿತು..? ಇಪ್ಪತ್ತು-ಇಪ್ಪತ್ತೆರಡು ವರ್ಷಗಳ ಕಾಲ ನಿನಗೆ ಒಂದಿನಿತು ಕಷ್ಟವಾಗದಂತೆ ಜೋಪಾನವಾಗಿ, ನಿನ್ನ ಖುಷಿಯಲ್ಲೇ ತಮ್ಮ ಖುಷಿ ಕಾಣುತ್ತಿದ್ದ ಹೆತ್ತವರು ಮಾಡಿದ ಪಾಪವಾದ್ರೂ ಏನು..? ಅವರಿಗ್ಯಾಕೆ ಇಂಥಾ ಘೋರ ಶಿಕ್ಷೆ? ಹೋಗೋ ಮೊದ್ಲು ಸ್ವಲ್ಪ ಯೋಚಿಸ್ಬೇಕಲ್ವ... ಮುಂದೆ ನಿನ್ನ ಮಗಳೂ ಹೀಗೇ ಮಾಡಿದ್ರೆ ಹೇಗಾದೀತು..? ಒಮ್ಮೆ ಕಲ್ಪಿಸ್ಕೋ ಪ್ಲೀಸ್...

ಫಾರಿನ್ ಸೆಂಟಿನ ಪರಿಮಳದ ಹಿಂದಿರುವ ನರಕದ ಬಗೆಗೆ ತಿಳಿದುಕೊಳ್ಳುವಷ್ಟು ಪ್ರಜ್ಞೆ ನಿನ್ನಲ್ಲಿದೆ ತಾನೆ..? ಡುರ್ರೆ೦ದು ಬರುವ ಯಾರದೋ ಬಾಡಿಗೆ ಮೋಟರ್ ಸೈಕಲ್ ಮೇಲೆ ನಿನ್ನ ಜೀವನ ಅದೆಷ್ಟು ದಿನ ಸುಗಮವಾಗಿ ಸಾಗೀತು..? ಮನೆ ತಲುಪೋವಾಗ ಎಷ್ಟೇ ತಡವಾದ್ರೂ ನಿನ್ ಜೊತೇನೇ ಊಟ ಮಾಡೋಕಂತ ಕಾಯ್ತಿದ್ದ ಅಮ್ಮ ಈಗ ಏನ್ ಮಾಡ್ಬೇಕು..? ನಿನ್ನ ಕಾಣದ ಅವಳಿಗೆ ಒಂದು ತುತ್ತಾದ್ರೂ ಊಟ ಸೇರೀತಾ..? ಮಗಳ ಮದುವೆಗೇಂತ ಕಷ್ಟಪಟ್ಟು ಎಷ್ಟೋ ವರ್ಷಗಳಿಂದ ಬೆವರಿಳಿಸಿ ಸಂಪಾದಿಸಿ ಹಣ ಕೂಡಿಟ್ಟ ಅಪ್ಪನಿಗೆ ಇನ್ಯಾವ ಸಂಭ್ರಮವಿದೆ..?

ಪ್ಲೀಸ್...ಒಂದೇ ಒಂದ್ಸಲ ಮನಸ್ಸಿಟ್ಟು ಆಲೋಚಿಸು. ನಿಜವಾದ ಪ್ರೀತಿ ಯಾವುದು... 'ಆಕರ್ಷಣೆ'ಯ ಬೆಂಬತ್ತಿ ಹೋಗಿ ಅಮೂಲ್ಯ ಜೀವನ ಹಾಳುಮಾಡಿಕೊಳ್ತೀಯಾ... ಅಥವಾ ನಿಜವಾದ ಪ್ರೀತಿಯೊಂದಿಗಿದ್ದು, ಇಷ್ಟು ವರ್ಷ ಸಲಹಿದ್ದಕ್ಕಾಗಿ ಅವರನ್ನು ಚಂದದಿಂದ ನೋಡಿಕೊಂಡು ಜೀವನಸಾರ್ಥಕತೆಯನ್ನು ಪಡ್ಕೊಳ್ತೀಯಾ...
ನಿಲ್ಲು ಸೋದರಿ...ಇಲ್ಲೊಮ್ಮೆ ಕೇಳು...