04 December 2012

ಶಿಕ್ಷಣವೆಂಬ ಭಾರೀ ಬಿಸ್‌ನೆಸ್ಸು...




ಕಾಲವೊಂದಿತ್ತು.. ವಿದ್ಯೆಯು ಒಂದು ಮಹಾದಾನವಾಗಿದ್ದ ಕಾಲ ಒಂದಿತ್ತು.. ಗುರುವು ತನ್ನ ಜ್ಞಾನವನ್ನು ದಾನವಾಗಿ ಧಾರೆಯೆರೆಯುತ್ತಿದ್ದ ಕಾಲವದು. ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆಯಾಗಿತ್ತದು. ಶಿಷ್ಯನು ತನ್ನ ಶಕ್ತ್ಯಾನುಸಾರ ಗುರುದಕ್ಷಿಣೆ ನೀಡಿದರೆ ಸಾಕಿತ್ತು. ಗುರುವಿನ ಕುರಿತಾದ ಗೌರವಾದರಗಳೂ ಶ್ರೇಷ್ಠಮಟ್ಟದಲ್ಲಿದ್ದವು.

ಕಾಲಕಳೆದಂತೆ ಶಾಲೆಗಳು ತೆರೆದು ಶಿಕ್ಷಣದ ಹರವು ಹೆಚ್ಚಾಗುತ್ತಾ ಬಂತು. ನಿಯಮಿತವಾದರೂ ಕೈಗೆಟುಕುವ ಶುಲ್ಕದಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿತ್ತು. ಈಗಲೂ ಸರ್ಕಾರಿ ಶಾಲೆಗಳಲ್ಲಿ ಅಂಥ ಶಿಕ್ಷಣ ದೊರೆಯುತ್ತಿದೆ. ಆದರೆ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವುದು ನಮ್ಮ ಸಮಾಜದ ನಾಗರಿಕರ ಮರ್ಯಾದೆಗೆ ಕಡಿಮೆಯಾಗುತ್ತಲ್ಲ..?! ಹಾಗಾಗಿ ತಮ್ಮ ಮಕ್ಕಳನ್ನು ’ಅತ್ಯುತ್ತಮ’ ಖಾಸಗಿ ಶಾಲೆಗಳಿಗೆ ಸೇರಿಸುವ trend ಪ್ರಾರಂಭವಾಯ್ತು. ಅದರಲ್ಲೂ ತಮ್ಮ ಮಕ್ಕಳು ಇಂಟರ್‌ನ್ಯಾಶನಲ್ ಸ್ಕೂಲೋ, ಟೆಕ್ನೋ ಸ್ಕೂಲ್‌ನಲ್ಲೋ ಕಲಿತರೆ ಅತಿಬುದ್ಧಿವಂತರಾಗಿ, ಮುಂದೆ ನೋಬೆಲ್ ಪ್ರೈಜ್ ತಗೊಳ್ತಾರೆ ಅನ್ನೋ ಭ್ರಾಂತಿ!

ಪೋಷಕರ ಈ ಭ್ರಾಂತಿಯು ಹೊಸತೊಂದು ’ಬ್ಯುಸಿನೆಸ್’ನ ಉದಯಕ್ಕೆ ನಾಂದಿಯಾಯ್ತೇನೊ! so called ಮೌಲ್ಯಿಕ ಶಿಕ್ಷಣ ಸಾಮಾನ್ಯ ವರ್ಗದವರ ಕೈಗೆಟುಕದ ಮಟ್ಟಕ್ಕೆ ಏರಿಬಿಟ್ಟಿತು. ಬೆಂಗಳೂರೆಂಬ ಮಹಾನಗರದಲ್ಲಿ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಶುಲ್ಕ ಎಷ್ಟೆಂದು ಕೇಳಿದ್ರೆ ಆಶ್ಚರ್ಯವಾಗುತ್ತೆ! ವರ್ಷಕ್ಕೆ 70-80 ಸಾವಿರ ರುಪಾಯಿಗಳು! ತಾಂತ್ರಿಕ ಶಿಕ್ಷಣಕ್ಕೆ ತತ್ಸಮಾನವಾದ ಶುಲ್ಕ ಪ್ರಾಥಮಿಕ ಶಿಕ್ಷಣಕ್ಕೆ!

ಕಡೆಗೂ ವಿದ್ಯೆಯ ಶ್ರೇಷ್ಠತೆಯನ್ನು ’ಶುಲ್ಕ’ದಲ್ಲಿ ಅಳೆಯುವ ಕಾಲ ಬಂತಲ್ಲ.. ಮಹಾದಾನವೆನಿಸಿದ್ದ ವಿದ್ಯೆಯನ್ನೂ ವ್ಯಾಪಾರೀಕರಣ ಮಾಡುವ ಗತಿ ಬಂತಲ್ಲ..ಛೆ, ಎಂಥಾ ವಿಪರ್ಯಾಸವಿದು!

09 August 2012

ವೇಣುಲೋಲನ ನಮಿಸುತ್ತಾ...



ಆ ಮುರಲಿಯಲ್ಲದೇನು ಮೋಡಿಯಿಹುದೋ...
ಆ ವೇಣುಗಾನದ ನಾದವದೇನು ಮಾಯೆ ಮಾಡಿಹುದೋ...
ಆ ಕೊಳಲ ಕೊರಳಲ್ಲದ್ಯಾವ ಕೋಗಿಲೆಯಿಹುದೋ...
ಅದ ಕೇಳುತ್ತಿದ್ದರೆ ಮನವಿದು ಮಿಡಿಯದಿರದು...
ಎದ್ದೆದ್ದುಬರುವ ತಲ್ಲಣಗಳೆಲ್ಲ ಅಲ್ಲೇ ಸ್ತಬ್ಧವಾಗಿಬಿಡುವವು...
ಇಂತಿರಲು,
ಆ ಅಸದಳ ನಾದದೊಡೆಯ ಶ್ರೀಕೃಷ್ಣನ ಸಾನ್ನಿಧ್ಯ ಇನ್ನೆಷ್ಟು ಹಿತವಿರಬಹುದು...
ಅವನೊಲುಮೆಯ ಕೃಪಾಕಟಾಕ್ಷದ ಮುಂದೆ ಕಷ್ಟಗಳೆಲ್ಲ ಕರಗಿಹೋದಾವು...
ಸಮ್ಮೋಹನಗೊಳಿಸುವ ಮೋಹನಗಾನಪ್ರಿಯನ ಈ ಜನುಮದಿನ...
ವಿನೀತರಾಗಿ ಆತನ ಆಶೀರ್ವಾದ ಬೇಡೋಣ...

25 October 2011

ಈ ಅಬ್ಬರ ಬೇಕೆ?



ಪಕ್ಕದ ಮನೆಯ ಪುಟಾಣಿ ಹುಡುಗನಿಗೆ ಎರಡು ದಿನಗಳಿಂದ ಖುಷಿಯೋ ಖುಷಿ. ಕಾರಣ, ಅವನ ಮನದಿಚ್ಛೆಯ ಪಟಾಕಿಗಳು ಇಂದವನ ಕೈಸೇರಿವೆ. ಉಪವಾಸ ಸತ್ಯಾಗ್ರಹಾದಿಗಳು ರಾಷ್ಟ್ರಮಟ್ಟದ ರಾಜಕಾರಣಿಗಳ ಮೇಲೆ ಪ್ರಭಾವ ಬೀರದಿದ್ದರೂ ತನ್ನ ಮನೆಯಲ್ಲಿ ಖಂಡಿತಾ ಪರಿಣಾಮಕಾರಿಯಾಗುತ್ತದೆಂಬ ಅವನ ಅಚಲ ನಂಬಿಕೆ ಇಂದು ಮತ್ತಷ್ಟು ಗಟ್ಟಿಯಾಗಿತ್ತು. ನಾಕು ದಿನಗಳಿಂದ ಹಿಡಿದ ಹಟ ಸಾರ್ಥಕವಾಗಿತ್ತು. ರಂಗು ರಂಗಿನ ಢಂ ಢಮಾರೆನ್ನುವ ಹತ್ತು ಹಲವು ಬಗೆಯ ಪಟಾಕಿಗಳು ಪುಟ್ಟ ಕೈಯಿಂದ ಬೆಂಕಿ ಕಾಣುವ ತವಕದಿ ಕಾದು ಕುಳಿತಿವೆ.

ಹಬ್ಬಗಳ ರಾಜ ಬಂದನೆಂದಾಗ, ದೀಪಗಳಷ್ಟೇ ಗಾಢವಾಗಿ ಪಟಾಕಿಗಳ ಅಬ್ಬರವೂ ನೆನಪಾಗುತ್ತದೆ. ಮಕ್ಕಳಿಗಂತೂ ದೀಪಾವಳಿಯೆಂದರೆ ಅದು 'ಪಟಾಕಿ' ಅಷ್ಟೇ ಎಂಬ ಭಾವನೆ ಬೇರೂರುವಂತಾಗಿದೆ. ಕಾರಣ ಮತ್ಯಾರೂ ಅಲ್ಲ, ನಾವೇ. ಮಗುವಿಗಿನ್ನೂ ಮಾತು ಬರುವ ಮೊದಲೇ ಪಟಾಕಿಯ ಸದ್ದು ಪರಿಚಿತವಾಗುವಂತೆ ಮಾಡುತ್ತೇವೆ ನಾವು. ಅದು ಬೆಳೆದಂತೆ ಪಟಾಕಿಗಾಗಿ ಹಟ ಮಾಡುತ್ತದೆ. ಅದರಿಂದಾಗಬಹುದಾದ ಅನಾಹುತಗಳ ಬಗ್ಗೆ ವಿವೇಚಿಸುವಷ್ಟು ದೊಡ್ಡ ಮನಸ್ಸೇನೂ ಅದರದಾಗಿರುವುದಿಲ್ಲ ತಾನೆ?
ಮಕ್ಕಳಿಗೆ ಹಬ್ಬದ ಮಹತ್ವ, ಹಿನ್ನೆಲೆ ಇತ್ಯಾದಿಗಳನ್ನು ವಿವರಿಸುವ ಬದಲು, ಹಣವನ್ನೇ ಸುಡುವುದನ್ನು ಹೇಳಿಕೊಡುತ್ತೇವೆ. ಲಕ್ಷ್ಮಿ ಪೂಜೆ ಮಾಡಿಯಾದರೂ ಏನು ಪ್ರಯೋಜನ ಹೇಳಿ?
ಪ್ರತಿ ವರ್ಷ ಪಟಾಕಿ ಸಿಡಿತದಿಂದಾಗಿ ಗಾಯಗೊಂಡವರ, ಕಣ್ಣು-ಕೈ-ಕಾಲು ಕಳಕೊಂಡವರ ಆಕ್ರಂದನ ಹೆಚ್ಚಾಗುತ್ತಲೆ ಇದೆಯಷ್ಟೆ. ಕೆಟ್ಟ ಮೇಲೂ ಬುದ್ಧಿ ಕಲಿವ ಬುದ್ಧಿಯೂ ನಮಗಿಲ್ಲದಾಗಿಹೋದ್ದು ವಿಪರ್ಯಾಸ..!  

08 March 2011

ಮಹಿಳಾ ದಿನ

"ಅಮ್ಮಾ.. ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು..
ಮಿಡುಕಾಡುತಿರುವೆ ನಾನು..."
ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅಮ್ಮನ ಬಗ್ಗೆ ಎಷ್ಟು ಚೆನ್ನಾಗಿ ಬರ್ದಿದಾರಲ್ವ..
ಅಮ್ಮ ಅಂದ್ರೆ ಮಮತೆಯ ಕಡಲು, ಅಮ್ಮ ಅಂದ್ರೆ ಪ್ರೇಮದಾಗರ, ಅಮ್ಮ ಅಂದ್ರೆ ಸಹನೆ, ತಾಳ್ಮೆ, ಅಮ್ಮ ಅಂದ್ರೆ ಎಲ್ಲವೂ...
ಹೌದು, ಅಮ್ಮನ ಬಗ್ಗೆ ನಾಕಾರು ಹಗುರ ಪದಗಳ ಮಿತಿಯಲ್ಲಿ ವಿಸ್ತರಿಸಿ ವಿವರಿಸೋದು ಕಷ್ಟ. ಇದ್ದಕ್ಕಿದ್ದ ಹಾಗೆ ಅಮ್ಮನ ಬಗ್ಗೆ ಬರೀಬೇಕು ಅಂತನ್ಸಿದ್ದು ಈ ವಿಶ್ವ ಮಹಿಳಾ ದಿನ ಅಂತಂದಾಗ. ಒಬ್ಬ ಪರಿಪೂರ್ಣ ಮಹಿಳೆ ಅಂದ್ರೆ ಆಕೆ 'ಅಮ್ಮ'ನೇ ಅಲ್ವ? ಹುಟ್ಟಿದಲ್ಲಿಂದ ಹಲವಾರು ಬದಲಾವಣೆಗಳಿಗೆ ಹೊಂದಿಕೊಂಡು ಬಾಳಿ-ಬಾಳಿಸಿದವಳವಳು.

ನಮ್ಗೆ ಪೆಟ್ಟಾದ್ರೆ ನಮ್ಗಿಂತ್ಲೂ ಹೆಚ್ಚು ನೋವಾಗೋದು ಅಮ್ಮನಿಗೆ. ನಾವು ಊಟ ಮಾಡ್ದೆ ಹೋದ್ರೆ ತಲೆನೋವಾಗೋದು ಅಮ್ಮನಿಗೆ. ನಾವು ಹುಷಾರಿಲ್ದೆ ಆದ್ರೆ ನಿದ್ದೆ ಬರ್ದಿರೋದು ಅಮ್ಮನಿಗೆ. ಜೀವನಪೂರ್ತಿ ಮನೆಯ-ಮಕ್ಕಳ ಬಗ್ಗೇನೇ ಆಲೋಚನೆ ಮಾಡೋ ಅಮ್ಮನಿಗೆ ಮಿಗಿಲಾದ ನಿಸ್ವಾರ್ಥ ಮನೋಭಾವ ಬೇರೆಲ್ಲಿದ್ದೀತು?

ಅಂಥ ಅಮ್ಮನಿಗೆ... ಅಂಥ ಅಮ್ಮನ ಹೃದಯವಂತಿಕೆಯಿರುವವರೆಲ್ಲರಿಗೆ ಮಹಿಳಾ ದಿನದ ಶುಭಾಶಯಗಳು.