ಅಲ್ಲೊಂದು ಪುಟ್ಟ ಹಕ್ಕಿ.
ಕೂತಲ್ಲಿ ಕೂರದೆ,ಆ ಕೊಂಬೆಯಿಂದ ಈ ಕೊಂಬೆಗೆ ಹಾರಿ,ಅಂಗಳದಲ್ಲಿ ಅದೇನೋ ಕಾಳು ಕಂಡಂತಾಗಿ ಅದರತ್ತ ನೆಗೆದು,ಅತ್ತಿತ್ತ ತಲೆಯಾಡಿಸಿ,ಸುತ್ತಮುತ್ತ ಕಣ್ಣುಹಾಯಿಸಿ,ಅತ್ತಲಿಂದ ಯಾರೋ ಬರುತ್ತಿರುವುದ ಕಂಡು ಮತ್ತೆ ಮತ್ತೊಂದು ಮರದ ಕೊಂಬೆಗೇರಿ...- ಹೀಗೆ ಎಡೆಬಿಡದೆ ಚುರುಕಾಗಿ ಹಾರಾಡುತ್ತಿತ್ತು. ಐದು ನಿಮಿಷಗಳಲ್ಲಿ ಒಂದು ಇಪ್ಪತ್ತು ಬಾರಿ ಅತ್ತಿತ್ತ ಹಾರಿತ್ತೇನೊ...ಹಾಗೇ ಯೋಚಿಸ್ತಾ ಇದ್ದೆ. ಹೌದಲ್ವ, ಈ ಹಕ್ಕಿ ನಮ್ಮ ಮನಸ್ಸಿನ ಪ್ರತಿರೂಪದಂತೆ ಕಾಣ್ಸುತ್ತಲ್ಲ? ನಿಂತಲ್ಲಿ ನಿಲ್ಲದು,ಕೂತಲ್ಲಿ ಕೂರದು ಈ ಚಂಚಲ ಮನಸ್ಸು. ದೂರದಲ್ಲೆಲ್ಲೋ ಕಾಣುವ ಒಂದು ಪುಟ್ಟ ಬಯಕೆಯ ಕುಡಿಗಾಗಿ ಮಿಡಿದು,ಅದನ್ನು ಪಡೆಯಹೊರಡುತ್ತದೆ. ಒಂದು ಸಣ್ಣ ಅಡ್ಡಿ ಬಂದರೂ ಅದೇನೋ ತಳಮಳದಿಂದ ಹಿಂಜರಿದುಬಿಡುತ್ತದೆ. ಆದರೂ ಆಸೆ ಬಿಡಬೇಕಲ್ಲ...ಮತ್ತೆ ಅದಕ್ಕಾಗಿಯೇ ಪ್ರಯತ್ನ. ಹೀಗೆ ಸಣ್ಣ-ಪುಟ್ಟದಕ್ಕೆ ಆಸೆಪಟ್ಟು ಮುಗಿಬೀಳುವ ಹೊತ್ತಲ್ಲಿ ಕಳೆದುಕೊಳ್ಳುವ ದೊಡ್ಡ ದೊಡ್ಡ ಅವಕಾಶಗಳು ಅವೆಷ್ಟೊ! ದಿನನಿತ್ಯ ಇದೇ ಕಾಯಕ.
ಆದರೂ ಅಲ್ಲೇನೋ ಒಂದು ವಿಶೇಷ ಉತ್ಸಾಹ ಇದೆ. ಪೆಟ್ಟುಬಿದ್ದರೂ ಮತ್ತೆ ಪುಟಿದೇಳುವ ಸಾಮರ್ಥ್ಯ ಇದೆ. ಈ ಸಾಮರ್ಥ್ಯದ ಅರಿವು ಮಾತ್ರ ಕೆಲವೊಮ್ಮೆ ಸ್ವಲ್ಪ ಮರೆಯಾಗಿಬಿಡುತ್ತದೆ. ಆಗಲೇ ಬಂದುಬಿಡುತ್ತದೆ ನೋಡಿ,ಖಿನ್ನತೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಇದಕ್ಕೊಳಗಾಗಿಯೇ ಆಗುತ್ತಾರೆ. ಆಗಲೂ ಬೇಕು. ಹಾಗೆ ಆಗಿ,ಅದನ್ನು ಈಸಿದಾಗ ನಮ್ಮಲ್ಲೊಂದು ದೃಢತೆ, ಆತ್ಮಸ್ಥೈರ್ಯ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ.
ಹೇಳುತ್ತಾರೆ ಹಲವರು,ಮನಸ್ಸನ್ನು ನಿಯಂತ್ರಣದಲ್ಲಿರಿಸುವುದು ಬಹಳ ಕಷ್ಟ,ಯೋಗಿಗಳಿಂದ ಮಾತ್ರ ಅದು ಸಾಧ್ಯ ಅಂತ. ಹೌದೇನು? ನಮ್ಮಿಂದ ಸಾಧ್ಯವಿಲ್ವೇನು? ಸಾಧ್ಯವಿಲ್ದೇ ಇದ್ದಿದ್ರೆ ನಾವು ಇಷ್ಟು ಬೆಳೀತಿದ್ವ? ಯಾವುದೋ ಹಾಳುಕೊಂಪೆಯಲ್ಲಿ ಯಾರಿಗೂ ಬೇಡದವರಾಗಿ,ನಿಷ್ಕ್ರಿಯರಾಗಿರ್ತಿದ್ವಿ,ಅಲ್ವ?
ಹುಂ,ವಿಚಾರಲಹರಿ ಎಲ್ಲಿಂದಲೋ ಹೊರಟು,ಎಲ್ಲಿಗೋ ತಲುಪ್ತು. ಏನೇ ಹೇಳಿ, ಈ 'ಮನಸ್ಸು' ಅನ್ನೋದೊಂದು ಬಹಳ ಕುತೂಹಲಕರ ಸಂಗತಿ..!
ಅದರೊಳಗೊಂದು ಗಾಢ ನಿಗೂಢತೆಯಿದೆ..!
ಎಲ್ಲರಲ್ಲಿಯೂ ಮನಸ್ಸಿನ ನಿಯಂತ್ರಣದ ಶಕ್ತಿ ಇದ್ದೇ ಇರುತ್ತದೆ.
ReplyDeleteಬಳಸಿಕೊಳ್ಳುವ ಪ್ರಮಾಣದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸ ಇರುತ್ತದೆ, ಅಷ್ಟೇ!
ಮನಸಿನ ಬಗೆಗೆ ತುಂಬಾ ಒಳ್ಳೆಯ ’ಅನುಸ್ವರ’ (ಬರಹ + ಸ್ವರ!)
ಮನಸ್ಸಿನ ಆಳ ಚಿಂತೆಗೆ ಮೀರಿದ್ದು, ಚಿಂತಿಸುವವನಿಗೆ ಮೀರಿದ್ದು, ಮನಸ್ಸಿದ್ದವನು ಮನುಷ್ಯ. ಒಳ್ಳೆ ಮನಸ್ಸು ಅಥವಾ ಒಳ್ಳೆಯದನ್ನು ಯೋಚಿಸುವ ಮನಸ್ಸು ಒಂದುಕಡೆಯಾದರೆ, ಎಲ್ಲೊ ಕೆಲವು ಬಾರಿ ಬೇಡವಾದದ್ದು ಅಥವಾ ಸರಿಯಲ್ಲ ಎಂಬುದು ಹುಟ್ಟುವುದು ಸಹಜ. ಅಂದರೆ , ಎರಡು ಮನಸ್ಸು ಇದೆ ಎಂಬ ಭಾವನೆಯಲ್ಲ, ಮನಸ್ಸಿನಲ್ಲಿ ಎರಡು ತರಹದ ಭಾವನೆಗಳು ಉಂಟು ಎಂದರ್ಥ. ನಿಂತನೀರಿನಂತೆ ಯೋಚಿಸುವ ಮನಸ್ಸು, ಅದು ತಿಳಿನೀರಾಗಿರಬಹುದು ಅಥವಾ ಮಲಿನವಾಗಿರಬಹುದು ಇದು ಒಂದು ವರ್ಗದ ಮನಸ್ಸು. ತೂಗುವ ಉಯ್ಯಾಲೆಯ ಪರಿ ಹಾಗೂ ಅಲ್ಲ ಹೀಗೂ ಅಲ್ಲ ಎಂದು ಎರಡು ಭಾವನೆಯನ್ನು ಒಪ್ಪಿಕೊಳ್ಳದೆ ಕೊನೆಗೆ ಏನೂ ಮಾಡದೆ ಸುಮ್ಮನೆ ಇರುವುದು. ಹರಿಯುವ ನೀರಿಗೆ ಹಲವು ದಾರಿ, ಝರಿಯಾಗಿ ಹರಿದರು ಸಾಕು ಹೊಳೆಯಾಗುವ ಸಾಮರ್ಥ್ಯ ಹೊಂದಿರುತ್ತದೆ. ಹೀಗೆ ಒಳ್ಳೆಯದ್ದನ್ನು ಯೋಚಿಸುವ ಮನಸ್ಸು ಕಲ್ಪನೆಯ ಅಲೆಗಳನ್ನು ಸೃಷ್ಟಿಸಬಹುದು.
ReplyDelete