ಏನಿವತ್ತು ತುಂಬಾ ಖುಷಿಯಾಗಿದೀರ! friend B'Day party ಇತ್ತಾ? ಜೋರಾ party? ಏನ್ gift ಕೊಟ್ರಿ? ಒಂದ್ನಿಮ್ಷ ತಡೀರಿ. ಸ್ವಲ್ಪ ಯೋಚ್ನೆ ಮಾಡಿ. ನಿಮ್ಮ ಪ್ರೀತಿಯ ಅಮ್ಮನ ಹುಟ್ಟಿದ ದಿನ ಯಾವಾಗ ಅಂತ ಗೊತ್ತಾ? ನೀವು ಮನೇಗ್ ಹೋದಾಗ್ಲೆಲ್ಲ ಹಬ್ಬದ ಅಡಿಗೆ ಮಾಡಿ, ಅದಕ್ಕೊಂದಷ್ಟು ಪ್ರೀತಿ ಬೆರೆಸಿ ಉಣಬಡಿಸಿ, ಆ ಅಮ್ಮ ಪ್ರತಿ ಸಾರಿ ನೀಡೊ partyಗೆ ಇದು ಸಾಟಿನಾ?
ಚಿಕ್ಕೋರಿದ್ದಾಗ "ಚಾಕ್ಲೇಟ್ ತಗೋ ಪುಟ್ಟಾ" ಅಂತ ಅದೆಲ್ಲೋ ಸಣ್ ಡಬ್ಬದಲ್ಲಿ ಎತ್ತಿಟ್ಟಿದ್ದ ಎರಡು ರೂಪಾಯಿ ಕೊಟ್ಟಿದ್ಳಲ್ಲ ಅಮ್ಮ. ಅವಳಿಗೆ ಅದೇನು gift ಕೊಟ್ಟಿದೀರಿ? ಅದು ಹೋಗ್ಲಿ ಬಿಡಿ. ಮುಂಜಾನೆ ಬೇಗ ಎದ್ದು ಅಡಿಗೆ ಮನೇನಲ್ಲಿ ಬ್ಯುಸಿಯಾಗಿರೋ ಅಮ್ಮನ ಬೆನ್ನಹಿಂದಿಂದ ಸದ್ದಿಲ್ಲದೆ ಹೋಗಿ, "happy B'day ಅಮ್ಮಾ" ಅಂತ ಒಂದೇ ಒಂದು ಮಾತು ಹೇಳಿ, ಅಮ್ಮನ ಪ್ರತಿಕ್ರಿಯೆ ನೋಡಿದ್ದೀರ? ಖಂಡಿತ ಆಗ ಅಮ್ಮನ ಹೃದಯ ಅದೆಷ್ಟು ಖುಷಿ ಪಡ್ಬಹುದು ಅಲ್ವಾ?
ಹೌದು. ಮರೀಬೇಡಿ. ಇನ್ಮುಂದೆ ಪ್ರತಿ ವರ್ಷನೂ friends B'dayಗೆ reminder ಇಡೋ ಥರಾ ಅಮ್ಮಂದಕ್ಕೂ ಇಡ್ತೀರಲ್ಲ? ಅಮ್ಮನ ಕಂಗಳಲ್ಲಿನ ಮಾಸದ ಹೊಳಪು ಮತ್ತಷ್ಟು ಹೊಳೆಯೋದನ್ನು ಮಿಸ್ ಮಾಡ್ಕೊಳ್ಳೋಲ್ಲ ಅಲ್ವ?
ಅಲ್ಲೊಂದು ಪುಟ್ಟ ಹಕ್ಕಿ.
ಕೂತಲ್ಲಿ ಕೂರದೆ,ಆ ಕೊಂಬೆಯಿಂದ ಈ ಕೊಂಬೆಗೆ ಹಾರಿ,ಅಂಗಳದಲ್ಲಿ ಅದೇನೋ ಕಾಳು ಕಂಡಂತಾಗಿ ಅದರತ್ತ ನೆಗೆದು,ಅತ್ತಿತ್ತ ತಲೆಯಾಡಿಸಿ,ಸುತ್ತಮುತ್ತ ಕಣ್ಣುಹಾಯಿಸಿ,ಅತ್ತಲಿಂದ ಯಾರೋ ಬರುತ್ತಿರುವುದ ಕಂಡು ಮತ್ತೆ ಮತ್ತೊಂದು ಮರದ ಕೊಂಬೆಗೇರಿ...- ಹೀಗೆ ಎಡೆಬಿಡದೆ ಚುರುಕಾಗಿ ಹಾರಾಡುತ್ತಿತ್ತು. ಐದು ನಿಮಿಷಗಳಲ್ಲಿ ಒಂದು ಇಪ್ಪತ್ತು ಬಾರಿ ಅತ್ತಿತ್ತ ಹಾರಿತ್ತೇನೊ...ಹಾಗೇ ಯೋಚಿಸ್ತಾ ಇದ್ದೆ. ಹೌದಲ್ವ, ಈ ಹಕ್ಕಿ ನಮ್ಮ ಮನಸ್ಸಿನ ಪ್ರತಿರೂಪದಂತೆ ಕಾಣ್ಸುತ್ತಲ್ಲ? ನಿಂತಲ್ಲಿ ನಿಲ್ಲದು,ಕೂತಲ್ಲಿ ಕೂರದು ಈ ಚಂಚಲ ಮನಸ್ಸು. ದೂರದಲ್ಲೆಲ್ಲೋ ಕಾಣುವ ಒಂದು ಪುಟ್ಟ ಬಯಕೆಯ ಕುಡಿಗಾಗಿ ಮಿಡಿದು,ಅದನ್ನು ಪಡೆಯಹೊರಡುತ್ತದೆ. ಒಂದು ಸಣ್ಣ ಅಡ್ಡಿ ಬಂದರೂ ಅದೇನೋ ತಳಮಳದಿಂದ ಹಿಂಜರಿದುಬಿಡುತ್ತದೆ. ಆದರೂ ಆಸೆ ಬಿಡಬೇಕಲ್ಲ...ಮತ್ತೆ ಅದಕ್ಕಾಗಿಯೇ ಪ್ರಯತ್ನ. ಹೀಗೆ ಸಣ್ಣ-ಪುಟ್ಟದಕ್ಕೆ ಆಸೆಪಟ್ಟು ಮುಗಿಬೀಳುವ ಹೊತ್ತಲ್ಲಿ ಕಳೆದುಕೊಳ್ಳುವ ದೊಡ್ಡ ದೊಡ್ಡ ಅವಕಾಶಗಳು ಅವೆಷ್ಟೊ! ದಿನನಿತ್ಯ ಇದೇ ಕಾಯಕ.
ಆದರೂ ಅಲ್ಲೇನೋ ಒಂದು ವಿಶೇಷ ಉತ್ಸಾಹ ಇದೆ. ಪೆಟ್ಟುಬಿದ್ದರೂ ಮತ್ತೆ ಪುಟಿದೇಳುವ ಸಾಮರ್ಥ್ಯ ಇದೆ. ಈ ಸಾಮರ್ಥ್ಯದ ಅರಿವು ಮಾತ್ರ ಕೆಲವೊಮ್ಮೆ ಸ್ವಲ್ಪ ಮರೆಯಾಗಿಬಿಡುತ್ತದೆ. ಆಗಲೇ ಬಂದುಬಿಡುತ್ತದೆ ನೋಡಿ,ಖಿನ್ನತೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಇದಕ್ಕೊಳಗಾಗಿಯೇ ಆಗುತ್ತಾರೆ. ಆಗಲೂ ಬೇಕು. ಹಾಗೆ ಆಗಿ,ಅದನ್ನು ಈಸಿದಾಗ ನಮ್ಮಲ್ಲೊಂದು ದೃಢತೆ, ಆತ್ಮಸ್ಥೈರ್ಯ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ.
ಹೇಳುತ್ತಾರೆ ಹಲವರು,ಮನಸ್ಸನ್ನು ನಿಯಂತ್ರಣದಲ್ಲಿರಿಸುವುದು ಬಹಳ ಕಷ್ಟ,ಯೋಗಿಗಳಿಂದ ಮಾತ್ರ ಅದು ಸಾಧ್ಯ ಅಂತ. ಹೌದೇನು? ನಮ್ಮಿಂದ ಸಾಧ್ಯವಿಲ್ವೇನು? ಸಾಧ್ಯವಿಲ್ದೇ ಇದ್ದಿದ್ರೆ ನಾವು ಇಷ್ಟು ಬೆಳೀತಿದ್ವ? ಯಾವುದೋ ಹಾಳುಕೊಂಪೆಯಲ್ಲಿ ಯಾರಿಗೂ ಬೇಡದವರಾಗಿ,ನಿಷ್ಕ್ರಿಯರಾಗಿರ್ತಿದ್ವಿ,ಅಲ್ವ?
ಹುಂ,ವಿಚಾರಲಹರಿ ಎಲ್ಲಿಂದಲೋ ಹೊರಟು,ಎಲ್ಲಿಗೋ ತಲುಪ್ತು. ಏನೇ ಹೇಳಿ, ಈ 'ಮನಸ್ಸು' ಅನ್ನೋದೊಂದು ಬಹಳ ಕುತೂಹಲಕರ ಸಂಗತಿ..!
ಅದರೊಳಗೊಂದು ಗಾಢ ನಿಗೂಢತೆಯಿದೆ..!
ಸ್ನೇಹಿತ್ರೆ, ಬಹಳಷ್ಟು ಬಾರಿ ಹೀಗಾಗುವುದಿದೆ. ಹಂಬಲಿಸಿ, ಹಂಬಲಿಸಿ ಇನ್ನೇನು ನಮ್ಮ ಕೈಗೆ ಸಿಕ್ಕೇ ಬಿಟ್ಟಿತು ಅಂದಾಗ, ಅದೆಲ್ಲಿಂದಲೋ ಬರಸಿಡಿಲೆರಗಿ ಅದನ್ನು ನಮ್ಮಿಂದ ದೂರ, ದೂರ ಮತ್ತೆ ಬರದಷ್ಟು 'ದೂರ'ದತ್ತ ದೂರಮಾಡಿಬಿಡುತ್ತದೆ. ಯಾಕೆ ಹಾಗಾಗುತ್ತೆ? "ಛೆ, ನನ್ಗೇ ಹೀಗಾಗ್ಬೇಕಾ?" ಅಂತನ್ನುವ ವೇದನೆ. ವಾಸ್ತವ ಅಂದ್ರೆ, ಆ ರೀತಿ ಆದವರು, ಅಂದುಕೊಂಡವರು ಬಹಳಷ್ಟು ಜನ ಇರ್ತಾರೆ. ನಮ್ಮ ಗಮನಕ್ಕೆ ಬಂದಿರೊಲ್ಲ ಅಷ್ಟೆ. ನಮ್ಗೆ ಮಾತ್ರ ಹೀಗಾಗಿದೆ ಅಂತಂದ್ಕೊಳ್ತೇವೆ.
ಆದ್ರೂ ಅಂಥ ಒಂದು ನೋವು ಮನಸ್ಸಿಗೆ ತೀರಾ ನಾಟುವಂಥದ್ದು, ಅಲ್ವ? ದೈಹಿಕ ಗಾಯಗಳು ಹೇಗೋ ವಾಸಿಯಾದಾವು, ಆದ್ರೆ ಮಾನಸಿಕವಾಗಿ ಘಾಸಿಯಾದದ್ದು. . .?
ಏನೋ ಒಂದು 'ಮ್ಯಾಜಿಕ್' ನಡೀಬಹುದೇನೊ. . . ಬಯಸಿದ್ದ ನಿರೀಕ್ಷೆಗಳು ಮತ್ತೆ ಎದ್ದು ಬರದಂತೆ ಸತ್ತು ಬಿದ್ದಿದ್ರೂ, ಮಾಯೆಯಿಂದ ಮೆಲ್ಲನೆ ಚಿಗುರಿ ಬಂದು ಮನಸ್ಸಿಗೆ ಮುದ ನೀಡೀತೇನೋ... - ಎಂದೆಲ್ಲ ಹುಚ್ಚು ಯೋಚನೆಗಳು. ಅದೆಲ್ಲ ಅಸಾಧ್ಯವೆಂದರಿವಿದ್ದರೂ, ಆ ರೀತಿಯ ಕಲ್ಪನೆಗಳೇ ಒಂದು ರೀತಿ ಮುದ ನೀಡುತ್ತವೆ. ಅವುಗಳ ಆಧಾರದಲ್ಲೇ ಬದುಕು ಸವೆಯುತ್ತದೆ, ಸಾವಕಾಶವಾಗಿ.
ಸ್ನೇಹಿತ್ರೆ ಒಮ್ಮೆ ಯೋಚ್ನೆ ಮಾಡಿ, ಯಾಕಾಗುತ್ತೆ ಇಂಥ ನಿರಾಸೆಗಳು..? ಏನನ್ನೋ ತುಂಬಾ ನಿರೀಕ್ಷಿಸಿದ್ವಿ. ಅದು ಆಗ್ಲಿಲ್ಲ ಅಂತ ತಾನೆ? ಹೌದು, ನಿರಾಸೆಗೆ ಕಾರಣ ನಮ್ಮ ನಿರೀಕ್ಷೆ. ನಮ್ಮ expectation ಜಾಸ್ತಿ ಆದ ಹಾಗೆ ನಿರಾಸೆಗಳೂ ಜಾಸ್ತಿಯಾಗ್ತವೆ. ಜೀವನದಲ್ಲಿ ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಕಲಿಯುವ ದೊಡ್ಡ ಪಾಠ- ನಿರೀಕ್ಷೆಯೇ ನಿರಾಸೆಯ ಮೂಲ ಅಂತ. ಹಾಗಂತ ಏನನ್ನೂ ನಿರೀಕ್ಷಿಸದೇ ಹೇಗೆ ಜೀವನ ನಡೆಸೋದು? ಯಾವ್ದೇ ಕೆಲ್ಸ ಆದ್ರೂ ಒಂದು ನಿರೀಕ್ಷೆ ಇಲ್ದಿದ್ರೆ ಅದನ್ನು ಮಾಡೋದಕ್ಕೆ ಮನಸ್ಸು ಬರುತ್ತಾ? - ಅಂತೆಲ್ಲ ಪ್ರಶ್ನೆಗಳು ಮೂಡ್ಬಹುದು. ಒಂದು ಅಂಶ ನಾವು ಗಮನಿಸ್ಬೇಕಾದ್ದು, ಏನಂದ್ರೆ, ಈ ನಿರೀಕ್ಷೆ ಬೇರೆ, ಆಕಾಂಕ್ಷೆ ಬೇರೆ. ನಮ್ಗೆ ಯಶಸ್ಸು ಸಿಗ್ಬೇಕಂದ್ರೆ ನಾವೊಂದು ಮಹತ್ವಾಕಾಂಕ್ಷೆ ಹೊಂದಿರ್ಬೇಕು. ಅದಿದ್ದಾಗ ಕೆಲ್ಸ ಮಾಡೋ ಉತ್ಸಾಹ ತನ್ನಿಂತಾನೇ ಬಂದ್ಬಿಡುತ್ತೆ. ಮಹತ್ವಾಕಾಂಕ್ಷೆಯನ್ನು ಈಡೇರ್ಸಿಕೊಳ್ಳೋದು ನಮ್ಮ ಕೈಯಲ್ಲೇ ಇದೆ. ಆದ್ರೆ 'ನಿರೀಕ್ಷೆ' ಅನ್ನೋದು ಹಾಗಲ್ಲ. ಇನ್ನೊಬ್ಬರಿಂದ ಬರೋಂಥದ್ದನ್ನು ನಾವು ನಿರೀಕ್ಷೆ ಮಾಡೋದು ಅಷ್ಟೆ. ಏನೋ ಒಂದು ಅನಿರೀಕ್ಷಿತವಾಗಿ ಆಯ್ತು ಅಂದ್ರೆ ಅದ್ರಲ್ಲಿ ಸಿಗೋ ಖುಷಿ ಮತ್ತೆಲ್ಲೂ ಸಿಗೊಲ್ಲ ಅಲ್ವ. ವಿಪರ್ಯಾಸ ಏನಂದ್ರೆ ನಾವು ಆ ಅನಿರೀಕ್ಷಿತವನ್ನೇ ನಿರೀಕ್ಷೆ ಮಾಡ್ತೇವೆ.
"ನಂಗೊಂದು ಪೆನ್ನು ತರ್ತೀನಂತ ಹೇಳಿದ್ದೆ. . ತಂದ್ಯಾ ಅಮ್ಮ. . ?"
"ನಂಗೆ ನಿನ್ನಲ್ಲಿರೋ ಹಳೇ ಹಾಡುಗಳನ್ನು ಕೊಡ್ತೀನಂತ ಹೇಳಿದ್ದೆ. . . ತಂದ್ಯೇನೆ. . ?"
"ಮೊನ್ನೆ ಪತ್ರಿಕೇನಲ್ಲಿ ನನ್ನ ಲೇಖನ ಬಂದಿತ್ತೂಂದ್ನಲ್ಲ. . ಓದಿದ್ರಾ. .?"
- ಇವೆಲ್ಲ ನಮ್ಮ ಪ್ರೀತಿಪಾತ್ರರು ಪ್ರೀತಿಯಿಂದ ಕೇಳುವ, ಕೇಳಿದಷ್ಟೂ ಬಾರಿ ನಾವು "ಅಯ್ಯೋ ಮರ್ತೇ ಹೋಯ್ತು. . " ಅಂತ ಉತ್ತರಿಸೋ ಸಾಮಾನ್ಯ ಪ್ರಶ್ನೆಗಳು.
ನಾವು ಯಾರ್‍ಯಾರದ್ದೋ ಕೆಲಸಗಳನ್ನು ಮಾಡಿಕೊಡ್ತೇವೆ, ಯಾವ್ಯಾವುದನ್ನೋ ಸರಿಯಾಗಿ ನೆನಪಿಟ್ಟು ಎಚ್ಚರವಹಿಸಿ ಮಾಡಿಪೂರೈಸ್ತೇವೆ. ಆದ್ರೆ. . . ನಮ್ಮವರ ಪ್ರೀತಿಯ ಪುಟ್ಟ ಪುಟ್ಟ ಆಸೆಗಳನ್ನು ಪೂರೈಸೋದಕ್ಕೆ ಮರೆತೇ ಬಿಡ್ತೇವೆ.
ನಾವು ಎಷ್ಟೇ ಕಾಯ್ಸಿದ್ರೂ ಆ ಸುಂದರ ಅನುಬಂಧದಲ್ಲಿ ಎಳ್ಳಷ್ಟೂ ಬಿರುಕು ಬರದು ನೋಡಿ, ಅದು ಮೆಚ್ಚುವಂಥದ್ದು ಅಲ್ವ? ನಾಳೆ ಮತ್ತೆ ಅಷ್ಟೇ ಪ್ರೀತಿಯಿಂದ ಅದೇ ಪ್ರಶ್ನೆಗಳು ಎದುರಾಗುತ್ತವೆ. ನಿರಾಸೆಯಾದರೂ ತೋರ್ಪಡಿಸದೆ ಒಂದು ನಿಡಿದಾದ ಉಸಿರಲ್ಲಿ ವಿಷಯಕ್ಕೆ ಪೂರ್ಣವಿರಾಮ ಹಾಕಿಬಿಡುತ್ತಾರೆ. ಬೇರೆ ಏನೆಲ್ಲ ಸಮಸ್ಯೆಗಳಿವೆಯೋ ಏನೋ. . ಇರ್ಲಿ. . ನೆನಪಾದೀತು ಒಂದು ದಿನ. . ಎಂಬ ಸಮಾಧಾನ ತನ್ನಷ್ಟಕ್ಕೇ ಬಂದುಬಿಡುತ್ತದೆ.
ಅಂತಹ ಒಂದು understanding ನಿಂದಲೇ ತಾನೆ, ಈ ಜೀವನ ಸುಗಮವಾಗಿ ನಡೀತಿರೋದು. . ?
'ನಾನು ಹೀಗೇನೇ' ಅಂದ್ರೆ ಅದು ಒಂದು ಪರಿಸರಕ್ಕೆ ಅಥವಾ ಒಬ್ಬ ವ್ಯಕ್ತಿಯ ದೃಷ್ಟಿಯಲ್ಲಿ ಸರಿಯಾದೀತಷ್ಟೆ.
ಹಾಗಂತ ಅಲ್ಲೊಂದು ರೀತಿ, ಇಲ್ಲೊಂದು ರೀತಿ ನಡ್ಕೊಳ್ಳುವವಳಲ್ಲ. ನನ್ನ ವ್ಯಕ್ತಿತ್ವ ಬದಲಾಗದಿದ್ರೂ, ನಾನು ವ್ಯವಹರಿಸುವ ಜನರು ಬದಲಾಗ್ತಿರ್ತಾರಲ್ವ...
ಅವರವರು ತಮಗೆ ಬೇಕಾದಂತೆ ನನ್ನ ಚಿತ್ರಣವನ್ನು ಬರ್ಕೊಂಡಿರ್ತಾರೆ. ಖಂಡಿತ ನಿಮ್ಗೂ ಇದೆ ಆ ಸ್ವಾತಂತ್ರ್ಯ.
ಬನ್ನಿ, ನನ್ನ ಧ್ವನಿಗೆ ಕಿವಿಗೊಟ್ಟು, ನೀವೂ ಧ್ವನಿಯಾಗಿ...