26 January 2010

ಬದಲಾವಣೆಯೊಂದಿಗೆ ಬದಲಾಗುತ್ತಾ...



ನಿತ್ಯ ಬರುವ ನಾಕಾರು forwarded ಮೆಸೇಜ್‌ಗಳು ಮನಸ್ಸಿಗೆ ಒಂದಷ್ಟು ಖುಷಿ, ನೆಮ್ಮದಿ ನೀಡ್ತವೆ. ಕೆಲವೊಂದಂತೂ ಮನಸ್ಸಿಗೆ ನಾಟಿ, ಹೊಸ ಉತ್ಸಾಹ ನೀಡ್ತವೆ, ಹೊಸ ಪ್ರೇರಣೆ ಕೊಡ್ತವೆ. ಹೀಗೇ ಗೆಳತಿಯೊಬ್ಬಳು ಕಳಿಸಿದ sms:
"Nothing can be changed by changing the face.. but, everything can be changed by facing the change."

ಹೌದಲ್ಲ! ಜೀವನದಲ್ಲಿ ಬದಲಾವಣೆಗಳು ಬಂದಾಗ ಒಮ್ಮೆಗೇ ಅದನ್ನು ಎದುರಿಸೋದಕ್ಕೆ ಮನಸ್ಸೇಕೋ ಹಿಂಜರಿಯುತ್ತೆ. ಯಾಕೆಂದ್ರೆ ನಾವು ಒಂದು mindsetಗೆ ಅಂಟಿಕೊಂಡಿರ್ತೇವೆ. ಅದು ಹಾಗೇನೇ ಆಗ್ಬೇಕು ಅಂತ ಬಲವಾಗಿ ಅಂದುಕೊಂಡಿರ್ತೇವೆ. ಹೀಗಿರೋವಾಗ ಏನಾದ್ರೂ ಸ್ವಲ್ಪ ಏರುಪೇರಾದ್ರೂ ವಿಪರೀತ ಪೇಚಾಡ್ತೇವೆ. ಆ ಬದಲಾವಣೆಗೆ ಹೊಂದಿಕೊಳ್ಳೋದಕ್ಕೆ ತುಂಬಾ ಕಷ್ಟವಾಗಿಬಿಡುತ್ತೆ. ಬೇಸರಮಾಡಿಕೊಂಡು ಮುಖಬಾಡಿಸಿಕೊಂಡು ಕೂತ್ರೆ ಏನು ಪ್ರಯೋಜನ?

ಅದ್ರ ಬದ್ಲು, ಬಂದ ಬದಲಾವಣೆಗೆ ಹೊಂದಿಕೊಂಡು ಅದಕ್ಕನುಗುಣವಾಗಿಯೇ ನಡ್ಕೊಂಡ್ರೆ ಆ ಬದಲಾವಣೆಯಲ್ಲೂ ಬದಲಾವಣೆ ತರ್ಬಹುದು. ಒಮ್ಮೆಗೇ ಆ ರೀತಿ ಬದಲಾಗುವುದು ಸ್ವಲ್ಪ ಕಷ್ಟವಾದೀತು. ಆದ್ರೂ ಪ್ರಯತ್ನಿಸ್ಬಹುದಲ್ವಾ..?

11 January 2010

ಸಂಬಂಧಗಳು...



ಈ ಸಂಬಂಧಗಳು ಅದೆಷ್ಟು ಸೂಕ್ಷ್ಮ!  ಸಣ್ಣ ರೇಷ್ಮೆ ಎಳೆಯಂತೆ.  ಒಂದೊಂದು ಎಳೆಯೂ ಅಷ್ಟೇ ಪ್ರಮುಖವೆನಿಸುತ್ತದೆ.  ಎಲ್ಲವೂ ಜೊತೆಸೇರಿ ಜೀವನದ ಹಂದರ ತಾನೆ?  ಬಿಗಿಯಾದರೆ ಅದೊಂದು ರೀತಿಯ ಚಡಪಡಿಕೆ.  ಇನ್ನು, ಸಡಿಲವಾಗಿ ಒಂದು ಎಳೆ ಕಡಿದು ಹೋದರೂ ಬಾಳೇ ನಶ್ವರವೇನೋ ಎಂಬ ಭಾವ.

ಸಂಬಂಧದ ಬಳ್ಳಿ ಕೇವಲ ಹುಟ್ಟಿನಿಂದ ಸುತ್ತಿಕೊಂಡು ಬಂದದ್ದು ಮಾತ್ರವಲ್ಲ.  ಜೀವನದ ಹಲವು ಹಂತಗಳಲ್ಲಿ ಬೆಸೆದುಕೊಂಡದ್ದೂ ಇರಬಹುದು.  ಕೆಲವೊಂದು ಬಾರಿ ರಕ್ತಸಂಬಂಧಿಗಳಲ್ಲಿರದಷ್ಟು ಪ್ರೀತಿ, ಮಮಕಾರ ಈ ಬಂಧುಗಳಲ್ಲಿ ಹೊಸೆದುಕೊಂಡಿರುತ್ತದೆ.  ಅವರೊಂದಿಗಿನ ಒಡನಾಟ ಒಡಹುಟ್ಟಿದವರಿಗಿಂತಲೂ ಹೆಚ್ಚು ಆತ್ಮೀಯತೆಯಿಂದಿರುತ್ತದೆ.  ಹೀಗಿರುವಾಗ, ಒಂದು ಸಣ್ಣ ವೈಮನಸ್ಸು ಮೂಡಿಬಿಟ್ಟರೆ, ಬದುಕನ್ನೇ ಕೊಚ್ಚಿಕೊಂಡು ಹೋಗುವಂಥ ದುಃಖ ಉಕ್ಕುಕ್ಕಿ ಬರುತ್ತದೆ.  ಅಂಥ ಸೆಳೆತವಿರುತ್ತದೆ ಅಲ್ಲಿ.

ಸಂಬಂಧಗಳನ್ನು ಮೊದಲಿನಿಂದ ಕೊನೆವರೆಗೂ ಜೋಪಾನವಾಗಿ, ಹಾಳಾಗದಂತೆ ನೋಡಿಕೊಳ್ಳುವುದೂ ಒಂದು ಕಲೆ.  ನೆಮ್ಮದಿಯ ಜೀವನಕ್ಕೆ ಅತೀ ಅಗತ್ಯವದು.  ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.  ಅಣ್ಣನೊಂದಿಗಿನ ಬಾಂಧವ್ಯ, ತಮ್ಮನಿಗೆ ಬೇಸರ ತರಿಸುವಂತಿರಬಾರದು.  ನಮಗೆ ಎಲ್ಲರೂ ಬೇಕು ತಾನೆ?  ಹಾಗೆಯೇ ಅವರಿಗೂ ಕೂಡ.  ನಮ್ಮ ಒಂದು ಅನುಬಂಧ, ಇನ್ನೊಂದರ ಮನನೋಯಿಸುವಂತಿರಬಾರದು.  ಅವರು ನಮ್ಮ ಬಗ್ಗೆ ಗಮನಕೊಡದೇ ಇದ್ದಾಗ ನಮಗದೆಷ್ಟು ಬೇಸರವುಂಟಾಗುವುದೋ, ಅಷ್ಟೇ ಬೇಸರ ನಮ್ಮ ವೈಮನಸ್ಸಿನಿಂದಾಗಿ ಅವರಿಗೂ ಆದೀತು.  ಅವರು ನಮ್ಮವರು, ನಮ್ಮಂತೆಯೇ ಎಂಬ ಭಾವನೆ ನಮ್ಮಲ್ಲಿರಬೇಕು.  ಅದಕ್ಕೆ ತಕ್ಕಂತೆ ನಡೆದುಕೊಳ್ಳಲೂಬೇಕು.
ಇನ್ನೊಬ್ಬರಿಂದ ತಪ್ಪಾದಾಗ, ಮುನಿಸಿಕೊಂಡು ಮಾತುಬಿಟ್ಟು ಕೂತರೆ ಅದರಿಂದ ನಮಗೇ ತಾನೆ ನಷ್ಟ?  ಅವರೇ ಬಂದು ಕ್ಷಮೆ ಕೇಳಲಿ. . . ಎಂದು ಅಹಂ ಭಾವದಿಂದ ವರ್ತಿಸುವುದು ಮತ್ತೂ ದೊಡ್ಡ ತಪ್ಪೆನಿಸುವುದು.  ಒಂದು ಮಂದಹಾಸ ಬೀರುತ್ತಾ, ಪ್ರೀತಿಯಿಂದ, ಏನಾದರೂ ಸಮಸ್ಯೆ ಇದೆಯಾ. . . . ಅಂತೊಂದು ಮಾತು ಕೇಳಿದರೆ ಸಾಕು.  ಇನ್ನೇನು ಕೊನೆಗಾಣುವ ಸ್ಥಿತಿಯಲ್ಲಿದ್ದ ಸಂಬಂಧ, ಚಿಗುರಿಕೊಂಡು ಮತ್ತಷ್ಟು ಗಾಢವಾಗಿಬಿಡುತ್ತದೆ.  ಒಟ್ಟಿನಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಅಥವಾ ಅಳಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

05 January 2010

ಮೂರು ಹನಿಗಳು. . .



ಪುಟಾಣಿ ಹಕ್ಕಿ ಅಲ್ಲಿ
ತನ್ನ ಗೂಡಲ್ಲಿ
ಕಾಯುತಿಹುದು ಅಮ್ಮನಿಗಾಗಿ..
ಹಸಿದ ಹೊಟ್ಟೆಯ ಆರ್ತನಾದ
ಅದರ ಕರೆಯಲ್ಲಿ...

ರೆಕ್ಕೆ ಬಲಿತ ಹಕ್ಕಿ ಕಾಯುತಿಹುದು
ಆಚೆ ಊರಾಚೆ ಎಲ್ಲೆಗಳ ದಾಟಿ
ಹಾರಿ ಹೋಗಲು...
ಅಮ್ಮನ ಬೆಚ್ಚನೆಯ ಗೂಡ ತೊರೆಯಲು...
ನಾಳಿನ ಸುಂದರ ಕನಸುಗಳು
ಅದರ ಕಣ್ಮಿಂಚಲ್ಲಿ...

ಹಾರಿಹೋದ ಹಕ್ಕಿ ಕಾಯುತಿಹುದು
ಹುಡುಕಾಡುತಿಹುದು ಸಂಗಾತಿಗಾಗಿ
ನೋವು ನಲಿವ ಹಂಚಿಕೊಳ್ಳಲು...
ಪ್ರೀತಿ ತುಂಬಿದೊಂದು ಮನದ
ಒಲವ ಪಡೆವ
ಬಯಕೆ ಹೃದಯದಲ್ಲಿ...