04 November 2013

ನಾಗರಿಕರ ’ಅನಾಗರಿಕ’ತೆ


  ಬೆಂಗಳೂರೆಂಬ ಮಹಾನಗರ(ನರಕ)ದಲ್ಲಿ ನಾನು ಕಾಣುತ್ತಿರುವ ಎರಡನೇ ದೀಪಾವಳಿಯಿದು. ರಾಜ್ಯದ ರಾಜಧಾನಿ ಎನಿಸಿಕೊಂಡಿರುವ ಈ ನಗರದಲ್ಲಿ, ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬದಾಚರಣೆಗಳು ತಮ್ಮ ಮೂಲಾರ್ಥವನ್ನು ಕಳೆದುಕೊಂಡು ’ವೈಭವಪೂರ್ಣ’ ವಿಕೃತಿಯಲ್ಲಿ ಆಚರಿಸಲ್ಪಡುತ್ತಿವೆಯೆಂಬುದು ವಿಷಾದನೀಯ. ಪಕ್ಕದ ಮನೆಯವರಿಗಿಂತ ನಾವು ಹೆಚ್ಚು ಅದ್ದೂರಿಯಾಗಿ ಹಬ್ಬವನ್ನಾಚರಿಸಬೇಕೆಂಬ ಪೈಪೋಟಿ ಜನರಲ್ಲಿ! ಹಬ್ಬಗಳನ್ನು ಭಕ್ತಿಯಿಂದ ಆಚರಿಸುವುದರ ಬದಲು ’ಆಡಂಬರ’ದಿಂದ ಆಚರಿಸುವವರೇ ಅನೇಕರು.
ಇಂತಿರುವಾಗ ದೀಪಗಳ ಹಬ್ಬ ದೀಪಾವಳಿ ಈ ಬಾರಿಯೂ ಪಟಾಕಿಗಳ ದಡಬಡ ಸದ್ದಿನೊಂದಿಗೆ ಪ್ರಾರಂಭವಾಯ್ತು. ದೀಪ ಹಚ್ಚೋಣವೆಂದು ಮನೆಯಿಂದ ಹೊರಬಂದರೆ ಯಾವ ಕಡೆಯಿಂದ ಪಟಾಕಿ ಸಿಡಿದು ಕಣ್ಣು ಕಿವಿ ಸುಟ್ಟು ಹೋದೀತೋ ಎಂಬ ಭಯ! ಜೊತೆಗೆ ಉಸಿರಾಡುವ ಗಾಳಿಯ ಕಣ ಕಣದಲ್ಲೂ ಪಟಾಕಿಯ ದುರ್ನಾತಯುಕ್ತ,ವಿಷಪೂರಿತ ರಾಸಾಯನಿಕ ಸೇರಿ ಶ್ವಾಸಕೋಶಕ್ಕೆ ಅದೆಷ್ಟು ಹಾನಿ ಮಾಡಿದೆಯೋ?! ಸಾವಿರ ಸಾವಿರ ರುಪಾಯಿಗಳ ಪಟಾಕಿ ಸಿಡಿಸಿ ತಮಗೂ, ತಮ್ಮ ಪಕ್ಕದವರಿಗೂ ವಿವಿಧ ರೀತಿಯ ಹಾನಿಯುಂಟುಮಾಡುವುದರಲ್ಲಿ ಅದೇನು ಸಂಭ್ರಮ ಈ ಜನತೆಗೆ! ಅವರೆಲ್ಲ ಅನಕ್ಷರಸ್ಥರಾಗಿದ್ದರೆ, ಪಾಪ ಆ ಬಗ್ಗೆ ಅರಿವಿಲ್ಲ, ಎಲ್ಲರೂ ಮಾಡಿದಂತೆ ತಾವೂ ಮಾಡಬೇಕೆಂದುಕೊಳ್ಳುತ್ತಾರೆ ಎನ್ನಬಹುದು. ಆದರೆ ಇವರೆಲ್ಲ ಸುಪ್ರಸಿದ್ಧ ಕಾಲೇಜುಗಳಲ್ಲಿ ಕಲಿತು, ದ್ವಿ-ಪದವೀಧರರಾಗಿ, ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ತಣ್ಣಗೆ ಕುಳಿತು ಕೆಲಸ ಮಾಡುವವರು! ಹೋಗಲಿ ಬಿಡಿ, ಏನೋ ತಾವು ’ಬೆವರು ಸುರಿಸಿ’ ಸಂಪಾದಿಸುವ ಹಣದಲ್ಲಿ ಸ್ವಲ್ಪವನ್ನು ’ಸುಟ್ಟು’ ಹಾಳುಮಾಡೋಣ ಎಂದು ಅನ್ನಿಸಿ ಆ ರೀತಿ ಮಾಡುತ್ತಾರೆ ಎನ್ನೋಣ.ಆದರೆ, ಸುಟ್ಟ ಬಳಿಕ ಅಲ್ಲಿ ಉಂಟಾದ ಕಸದ ರಾಶಿಯನ್ನು ಸ್ವಚ್ಛಗೊಳಿಸಬೇಕೆಂಬ ಕನಿಷ್ಟ ಜ್ಞಾನವೂ ಇವರಲ್ಲಿಲ್ಲವಲ್ಲ! ಮೊದಲೇ ಕಸವಿಲೇವಾರಿ ದೊಡ್ಡ ತಲೆನೋವಾಗಿರುವಾಗ ಈ ’ಪಟಾಕಿ ಕಸ’ ಅದಕ್ಕೆ ಮತ್ತಿನ್ನಷ್ಟು ಸೇರ್ಪಡೆ. ಸಾಲು-ಸಾಲು ದೀಪಗಳನ್ನು ಹಚ್ಚಿಡಬೇಕಾದ ಮನೆಯ ಮುಂದೆಲ್ಲ ಪಟಾಕಿಗಳ ರಾಶಿ ರಾಶಿ ಕಸ! ಓಡಾಡುತ್ತಿರುವ ವಾಹನಗಳನ್ನೂ ಲೆಕ್ಕಿಸದೆ ರಸ್ತೆಯಲ್ಲೇ ಪಟಾಕಿಯಿಟ್ಟು ಸಿಡಿಸಿ ರಸ್ತೆಯ ತುಂಬೆಲ್ಲ ಆ ಕಸದಿಂದ ಅಲಂಕರಿಸುತ್ತಾರೆ.


ಆದರೂ, ಕೆಲವೊಂದು ಶಾಲೆಗಳು, ಸಂಸ್ಥೆಗಳು ಈ ನಿಟ್ಟಿನಲ್ಲಿ ಬದಲಾವಣೆ ತರುವ ಗಮನಾರ್ಹ ಕೆಲಸ ಮಾಡುತ್ತಿವೆ. ಪ್ರತಿವರ್ಷ ದೀಪಾವಳಿಗೆ ಪಟಾಕಿ ತರಲೇಬೇಕೆಂದು ಹಠ ಹಿಡಿಯುತ್ತಿದ್ದ ಬಂಧುವೊಬ್ಬರ ಮಗಳು, ಈ ಬಾರಿ ಪಟಾಕಿ ಬೇಡವೆಂದು ಖಡಾಖಂಡಿತವಾಗಿ ಹೇಳಿದಳಂತೆ! ಕಾರಣ, ಅವರ ಶಾಲೆಯಲ್ಲಿ ’ಮಾಲಿನ್ಯ ರಹಿತ’ ದೀಪಾವಳಿ ಆಚರಿಸಬೇಕೆಂದು ಹೇಳಿರುವುದು. ನಿಜಕ್ಕೂ ಇದು ಪ್ರಶಂಸಾರ್ಹ ವಿಚಾರ. ಪ್ರತಿ ಶಾಲೆಯಿಂದ, ಮನೆ-ಮನಗಳಿಂದ ಬದಲಾವಣೆ ಮೂಡಿಬರಬೇಕು. ವಿದ್ಯಾವಂತ ನಾಗರಿಕರು ಹಬ್ಬದ ಮಹತ್ವಕ್ಕನುಗುಣವಾಗಿ ಭಕ್ತಿಯಿಂದ ಆಚರಿಸಬೇಕೇ ಹೊರತು ಹುಚ್ಚು ಆಡಂಬರದ ಮೊರೆಹೋಗಬಾರದು.

ಎಷ್ಟೇ ವಿದ್ಯಾವಂತರಾಗಿದ್ದರೂ ಕೂಡ ಕೆಲವು ವಿಚಾರದಲ್ಲಿ ಕೆಲವರಿಗೆ ಅಜ್ಞಾನವೇ ಇರುತ್ತದೆ. ನನ್ನ ಸಹೋದ್ಯೋಗಿಯೊಬ್ಬರು ಸುಮಾರು 5000 ರೂ.ಗಳ ಪಟಾಕಿಯನ್ನು ಸುಟ್ಟು, ಆ ಬಗ್ಗೆ ಜಂಭದಿಂದ ಹೇಳಿಕೊಳ್ಳುತ್ತಿರುವುದನ್ನು ಕಂಡಾಗ ನಗಬೇಕೊ, ಮರುಕ ಪಡಬೇಕೊ ತಿಳಿಯದಾಯಿತು!

1 comment: