02 March 2010

ತಪ್ಪು ಯಾರದ್ದು. . .??ಸ್ನೇಹಿತ್ರೆ, ಕಳ್ದ ಕೆಲವು ತಿಂಗಳುಗಳಿಂದ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಒಂದು so called 'ರಿಯಾಲಿಟಿ ಶೋ'ದ ಬಗ್ಗೆ ಹೇಳಲೇಬೇಕನಿಸ್ತು.  ಮೇಲ್ನೋಟಕ್ಕೆ ಅದೊಂದು ಉತ್ತಮ ಕೌನ್ಸಿಲಿಂಗ್ ಕಾರ್ಯಕ್ರಮದ ಹಾಗೆ ಭಾಸವಾಗುತ್ತೆ.  ಅಥವ ಆ ರೀತಿ ಭಾಸವಾಗುವಂತೆ ತೋರ್ಪಡಿಸ್ತಾರೆ.  ಅವರು ಹೇಳೋ ಪ್ರಕಾರ ಅವರ ಉದ್ದೇಶ ನೊಂದ ಮನಗಳಿಗೆ ಸಾಂತ್ವನ ಹೇಳೋದು, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸೋದು, ಮನಸ್ತಾಪಗಳನ್ನು ದೂರೈಸಿ ನೆಮ್ಮದಿ ನೀಡೋದು ಇತ್ಯಾದಿ
ಇತ್ಯಾದಿ...  ಈ ಬಣ್ಣದ ಮಾತುಗಳಿಗೆ ಮರುಳಾಗಿ ಹಲವಾರು ಜನ, ನಮ್ಮ ಸಮಸ್ಯೆಗಳೂ ಬಗೆಹರಿದಾವು ಎಂಬ ಆಶಾಭಾವದಿಂದ ಈ ಚಾನೆಲ್ ಗಳ ಮೊರೆಹೋಗ್ತಾರೆ.      

ಆದರೆ ಅವರು ಮಾಡೋದೇನು....?  ಸಂಸಾರದ ನಾಲ್ಕು ಗೋಡೆಗಳ ಮಧ್ಯೆಯೇ ಬಗೆಹರಿಯಬೇಕಾದಂಥ ಸಮಸ್ಯೆಗಳನ್ನು ಜಗಜ್ಜಾಹೀರು ಮಾಡಿ, ವೀಕ್ಷಕರ ಹತ್ರ "ಇಲ್ಲಿ ತಪ್ಪು ಯಾರದ್ದು..?" ಅಂತ ಕೇಳ್ತಾರೆ.  ಇಲ್ಲಿ ತಪ್ಪು ಮತ್ತ್ಯಾರದ್ದೂ ಅಲ್ಲ, ಆ ಚಾನೆಲ್ ನವರದ್ದೇ.  ಗಂಡ-ಹೆಂಡತಿ, ಅತ್ತೆ-ಸೊಸೆ, ಅಣ್ಣ-ತಮ್ಮ, ತಂದೆ-ಮಗ ಕಚ್ಚಾಡುವುದನ್ನೇ ಒಂದು 'ಕಾರ್ಯಕ್ರಮ' ಅಂತ ಮಾಡಿ ತೋರಿಸ್ತಾರಲ್ಲ ಏನೆನ್ನಬೇಕು ಇದಕ್ಕೆ....ಕೊನೆಗೆ ಅವರಿಗೆ ತಾವೇ ಸಾಂತ್ವನ ಹೇಳಿ, ಅವರ ಸಮಸ್ಯೆಯನ್ನು ತಾವೇ ಬಗೆಹರಿಸಿದ್ದೇವೇಂತ ಪೋಸು ಕೊಡ್ತಾರೆ.  ಸಮಸ್ಯೆ ಬಗೆಹರಿಸುವ ಒಳ್ಳೆ ಮನಸ್ಸು ಇದ್ರೆ, ಅವರ ಸ್ಟುಡಿಯೊದೊಳ್ಗಡೆನೇ ಒಂದು ಕೌನ್ಸಿಲಿಂಗ್ ಮಾಡಿ, ಮನಸ್ತಾಪ ಪರಿಹರಿಸ್ಬಹುದಲ್ಲ... ಅದನ್ನು ಚಿತ್ರೀಕರಿಸಿ ಊರೆಲ್ಲ ಪ್ರಚಾರ ಮಾಡೋ ಅಗತ್ಯ ಇದ್ಯಾ?  ಈ ರೀತಿ ಮಾಡೋದ್ರಿಂದ ಆ ಸಂಸಾರದ ಮಾನ, ಮರ್ಯಾದೆ ಬೀದಿಪಾಲಾಗುತ್ತೆ ಅನ್ನುವ ಕನಿಷ್ಟ ಜ್ಞಾನ ಕೂಡ ಇವ್ರಿಗೆ ಇಲ್ವ...?!  ಮುಂದೆ ಅವರು ಸರಿಯಾಗಿ ಬದುಕಲು ಪ್ರಾರಂಭಿಸಿದರೂ ಸುತ್ತಲಿನ ಸಮಾಜ ಅವರನ್ನು ಯಾವ ದೃಷ್ಟಿಯಲ್ಲಿ ನೋಡೀತು...?  ಪ್ರತಿಬಾರಿಯೂ ಬೊಟ್ಟುಮಾಡಿ ತೋರಿಸಿ ನಗುವ ಜನರ ಮಧ್ಯೆ ಅವರ ಜೀವನ ಇನ್ನಷ್ಟು ನರಕಸದೃಶವಾಗೊಲ್ವೆ...?

ಮಾಧ್ಯಮಗಳು ಯಾವಾಗಲೂ ಜನಪರ ಕಾರ್ಯಕ್ರಮಗಳಿಗೆ, ಸಮಾಜದ ಏಳಿಗೆಗೆ ಒತ್ತುಕೊಡುವಂಥ ಕಾರ್ಯಕ್ರಮಗಳಿಗೆ ಮನ್ನಣೆ ನೀಡಬೇಕಲ್ಲ... ಟಿ.ಆರ್.ಪಿ ಗಿಟ್ಟಿಸುವ ಭರದಲ್ಲಿ ಜನಜೀವನಕ್ಕೆ ಮುಳುವಾಗುವಂಥ ಕಾರ್ಯಕ್ರಮಗಳನ್ನು ಹುಟ್ಟುಹಾಕೋದು ಎಷ್ಟು ಸರಿ...?

ಗುರುತು ಪರಿಚಯವೇ ಇಲ್ಲದ ನಮ್ಮನ್ನುಳಿಸೋದಕ್ಕಾಗಿ ಸಾವಿರಾರು ಯೋಧರು ಹಗಲಿರುಳು ಹೊಣೆಯುತ್ತಿದ್ದಾರೆ, ಹಿಮಪಾತಕ್ಕೆ ಬಲಿಯಾಗ್ತಿದಾರೆ.  ಅವರ ಕಷ್ಟ, ನೋವುಗಳು, ಅವರ ಕುಟುಂಬದ ಪರಿಸ್ಥಿತಿ ಇತ್ಯಾದಿಗಳ ಬಗ್ಗೆ ಯಾರೂ ಯೋಚಿಸೋದೇ ಇಲ್ಲ.  ಆ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಮಾಡಿದರೆ ಅಷ್ಟಾದ್ರೂ ಪುಣ್ಯ ಬಂದೀತು.  ಉಂಡು ಮಲಗುವಲ್ಲಿಗೆ ಮುಗಿಯಬೇಕಾದ ಗಂಡಹೆಂಡಿರ ಜಗಳಕ್ಕೆ ರಂಗುರಂಗಿನ ಕಥೆಕಟ್ಟಿ ಜಗಜ್ಜಾಹೀರು ಮಾಡುವ ಬದಲು ದೇಶದೇಳಿಗೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಮಾಡಬಾರದೇಕೆ?

ಮೊದಲು ಇಂಥ ಕಾರ್ಯಕ್ರಮಗಳಿಗೆ ಕುಮ್ಮಕ್ಕು ನೀಡುವ ನಾವು ಎಚ್ಚೆತ್ಕೊಬೇಕು.  ಟೀವಿಯಲ್ಲಿ ಕಾಣಿಸಿಕೊಳ್ಳಬೇಕನ್ನೊ ಹುಚ್ಚುಆಸೆಯ ಬಿರುಗಾಳಿಗೆ ಸಂಸಾರ ನೌಕೆ ಬಲಿಯಾಗದಂತೆ ನೋಡಿಕೊಳ್ಬೇಕು. ಇಂಥ ಕಾರ್ಯಕ್ರಮಗಳ ವಿರುದ್ಧ ಒಕ್ಕೊರಲ ಹೋರಾಟ ನಡೀಬೇಕು.  ಅವರವರೊಳಗೆ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಗಳಿಗೆ ಬಹಿರಂಗ ಪ್ರಚಾರ ನೀಡಿ, ಅದನ್ನು ಮತ್ತಷ್ಟು ಉಲ್ಬಣಗೊಳಿಸುವ ಕಾರ್ಯಕ್ರಮಗಳಿಗೆ ಬಹಿಷ್ಕಾರವಿರ್ಲಿ.
ಏನಂತೀರಿ..?

6 comments:

 1. adestu blog. e-mail onpen madidre saku mithara emil. 'Blog update agide' anta. nanage blog ista agodu barahada shaili.

  Illi kuda aste.

  ReplyDelete
 2. ಒಳ್ಳೆಯ ವಿಚಾರವನ್ನೇ ಬರೆದಿದ್ದೀರಿ. ಈ ರೀತಿಯ ಕಾರ್ಯಕ್ರಮಗಳಿಗೆ ಹೋಗುವವರು ಹೆಚ್ಚಿನವರು ಹಳ್ಳಿ ಪ್ರದೇಶದ ಜನರೇ ಆಗಿರುತ್ತಾರೆ. ಇಲ್ಲ ಹಿಂದುಳಿದ ಸ್ಥಾನಗಳಿಂದ ಬಂದವರಾಗಿರುತ್ತರೆ. ಈ ಟಿ.ಆರ್.ಪಿ. ಮತ್ತೊಂದೆಲ್ಲ ಅರ್ಥ ಆಗೋದಿಲ್ಲ. ಹಾಗಾಗಿ ಅನಾಯಾಸವಾಗಿ ಮುಗ್ಧ ಜನರು ಈ ರೀತಿ ಕಾರ್ಯಕ್ರಮಗಳಲ್ಲಿ ಕಾಣಸಿಗುತ್ತರೆ.
  ಇಂದು ಮರ್ಯಾದೆ, ಗೌರವಯುತ ಬದುಕು ಈ ರೀತಿಯ ಪದಗಳ ಅರ್ಥವೇ ಅನರ್ಥವಾಗಿದೆ. ಹಾಗಾಗಿ ಅದು ಅನೇಕರಿಗೆ ಕೆಟ್ಟದಾಗಿ ತೋರುವುದಿಲ್ಲ. ಇನ್ನೊಬ್ಬರ ನೋವನ್ನು ಆನಂದದಿಂದ ನೋಡುವ ಜನರಿದ್ದರೆ. ಇಂದು ಮಾಧ್ಯಮಗಳು ಯವುದನ್ನು ಕೊಡಬೇಕೋ ಅದನ್ನು ಬಿಟ್ಟು ಸಮಾಜದ ದಿಕ್ಕು ತಪ್ಪಿಸುವ ಎಲ್ಲ ವಿಚಾರಗಳನ್ನು ನೀಡುತ್ತಿವೆ. ಇದೆಕ್ಕೆಲ್ಲ ಮೌಲ್ಯಾಧಾರಿತ ಶಿಕ್ಶಣದ ಅಗತ್ಯವಿದೆ.

  ಲೇಖನದ ವಿಚಾರ ಒಳ್ಳೆಯದಿದೆ.

  ReplyDelete
 3. ಹೌದು, ಇನ್ನೊಬ್ಬರ ನೋವನ್ನೇ ಮನರಂಜನೆಯಂತೆ ತೋರಿಸುತ್ತಿವೆ ಈ ಮಾಧ್ಯಮಗಳು.ನೀವು ಹೇಳಿದಂತೆ ಯಾರ ನೋವು ಹೈಲೈಟ್ ಆಗಬೇಕಿತ್ತೋ ಅದು ನಿರ್ಲಕ್ಷ್ಯಕ್ಕೊಳಗಾಗಿದೆ. ವೈಯಕ್ತಿಕ ನೆಲೆಯಲ್ಲಿ ನಾನಂತೂ ಇಂತಹ ಕಾರ್ಯಕ್ರಮಗಳಿಗೆ ಬಹಿಷ್ಕಾರ ಹಾಕಿದ್ದೇನೆ.

  ReplyDelete
 4. ಎಲ್ಲಿಯವರೆಗೆ ಟೋಪಿ ಹಾಕಿಕೊಲ್ಲುವನು ಇರುತ್ತಾನೋ ಅಲ್ಲಿಯವರೆಗೆ ಟೋಪಿ
  ಹಾಕುವವನು ಇರುತ್ತಾನೆ ಎನ್ನುವಂತೆ ಇದೆಲ್ಲ
  ನಾವೇ ಕಾರ್ಯಕ್ರಮ ನೋಡದಿದ್ದರೆ ಅವರು ಯಾರಿಗೆ ಮಾಡುತ್ತಾರೆ

  ReplyDelete
 5. blogisade tumaba dina aytu.

  ***

  ReplyDelete