17 June 2010

ಇದು ಯಾವ ನ್ಯಾಯ?



೧೯೮೪, ಡಿಸೆಂಬರ್ ೨ರ ಮಧ್ಯರಾತ್ರಿ. ಭಾರತದ ಮಧ್ಯಭಾಗದಲ್ಲಿರುವ ಮಧ್ಯಪ್ರದೇಶದ ರಾಜಧಾನಿ ಭೋಪಾಲ್. ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ಯಮಿಗಳ ವರೆಗೆ ಎಲ್ಲರೂ ದಣಿದು ಮನೆಸೇರಿ ಮಲಗಿದ್ರು. ಪುಟ್ಟ ಪುಟಾಣಿ ಮಕ್ಕಳೆಲ್ಲ ಸಿಹಿನಿದ್ದೆಯಲ್ಲಿ ಸವಿಗನಸು ಕಾಣ್ತಾ ಇದ್ರು. ಆಗಲೇ ಸುಳಿ ಸುಳಿದು ಬಂದಿತ್ತು, ಸದ್ದಿಲ್ಲದೆ ಸೋರಿಹೋದ ವಿಷಾನಿಲ ಮೃತ್ಯುರೂಪದಲ್ಲಿ! ಒಂದಲ್ಲ ಎರಡಲ್ಲ ಹದಿನೈದು ಸಾವಿರ ಜೀವಗಳು! ಮರುದಿನದ ಬೆಳಗನ್ನು ನೋಡದೇ ಕಣ್ಮುಚ್ಚಿದವು! ಮತ್ತಷ್ಟು ಸಾವಿರ ಜನ ಅಂಗಾಂಗ ಊನಗೊಂಡು ಹೀನಾಯ ಸ್ಥಿತಿ ತಲುಪಿದ್ರು. ಅದರ ಪರಿಣಾಮದ ಖಾಯಿಲೆಗಳು ಈಗಲೂ ಅನುವಂಶಿಕವಾಗಿ ಬಂದು ಕಾಡ್ತಾ ಇವೆ.
ಇಷ್ಟೆಲ್ಲ ಅನಾಹುತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಪೆಸ್ಟಿಸೈಡ್ಸ್ ಕಾರ್ಖಾನೆಯ ಮುಖ್ಯಸ್ಥವರ್ಗದವರಿಗೆ ಸಿಕ್ಕಿದ್ದು ಕೇವಲ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ೧ ಲಕ್ಷ ರೂ ದಂಡ. ಅದೂ ೨೪ ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ!
ಹದಿನೈದು ಸಾವಿರ ಜೀವಗಳ ಬೆಲೆ ಇಷ್ಟೇನಾ??! 

ಶಿಕ್ಷೆ ಘೋಷಣೆಯಾದ ತಕ್ಷಣವೇ ಶಿಕ್ಷೆಯಾದ ಎಲ್ಲರೂ ಜಾಮೀನಿಗೆ ಅರ್ಜಿ ಸಲ್ಲಿಸಿ, ೨೫೦೦೦ ರೂ ಭದ್ರತಾ ಮುಚ್ಚಳಿಕೆ ಪಡ್ಕೊಂಡು ಜಾಮೀನು ಪಡ್ಕೊಂಡೇ ಬಿಟ್ರಂತೆ!
ಇದೆಲ್ಲ ಬದಿಗಿರ್ಲಿ. ದುರಂತಕ್ಕೆ ಪ್ರಮುಖ ಕಾರಣಕರ್ತನಾದ ವಾರೆನ್ ಆ‍ಯ್ಂಡರ್‌ಸನ್ ವಿರುದ್ಧ ಯಾವುದೇ ಪ್ರಸ್ತಾಪ ಆಗೇ ಇಲ್ಲ!
ಆತ ಅತಿಬುದ್ಧಿವಂತ. ೧೯೮೩ರ ವಾರ್ಷಿಕ ವರದಿಯಲ್ಲಿ ಭೋಪಾಲ್ ಅನಿಲ ಘಟಕ ಅಸುರಕ್ಷಿತವಾಗಿದೆ, ಕೆಲವಾರು ಸಮಸ್ಯೆಗಳಿವೆ ಎಂದು ವರದಿಯಾಗಿತ್ತು. ಆತ ಅದರ ಆಧಾರದಲ್ಲಿ ಅಮೆರಿಕಾದಲ್ಲಿರುವ ಅನಿಲ ಸ್ಥಾವರವನ್ನು ಸರಿಪಡಿಸಿದ. ಭಾರತದಲ್ಲಿ ಏನೇ ಆದ್ರೂ ಪರ್ವಾಗಿಲ್ಲ, ಅಮೆರಿಕದ ಪ್ರಜೆಗಳು ಸಾಯೊಲ್ವಲ್ಲ ಅಂತ! ತತ್‌ಪರಿಣಾಮವೇ ಈ ಭೀಕರ ದುರಂತ!
ಅಲ್ಲಿದ್ದ ಕೆಡುಕುಗಳು ಏನು ಅಂತ ಸ್ವಲ್ಪ ಗಮನಹರಿಸಿ ಅಂದೇ ಸರಿಪಡಿಸಿದ್ರೆ ಎಷ್ಟೋ ಸಾವಿರ ಸಾವು-ನೋವು ತಪ್ತಾ ಇತ್ತಲ್ವ.
ದುರಂತದ ಬಳಿಕ ಕಿಂಚಿತ್ತು ಪಶ್ಚಾತ್ತಾಪವಾದರೂ ಆಗಿದ್ಯಾ ಆ ಮನುಷ್ಯನಿಗೆ? ಊಹೂಂ. ಸರಕಾರದ ಸಹಕಾರದಿಂದ ಸರಳವಾಗಿ ತಲೆಮರೆಸಿಕೊಂಡು ಅಮೆರಿಕಕ್ಕೆ ಹಾರಿ ಹೋದ!

ಭಾರತದ ನ್ಯಾಯವ್ಯವಸ್ಥೆ ಎಷ್ಟು 'ಕರುಣಾ'ಜನಕವಾಗಿದೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?
ದೇಶದ ಪ್ರಜೆಗಳಾದ ನಾವು ಸ್ವಲ್ಪ ಯೋಚಿಸ್ಬೇಕಲ್ವ? ಈ ನ್ಯಾಯ ವ್ಯವಸ್ಥೆಗೊಂದು ಮಹತ್ವದ ಮಾರ್ಪಾದು ಬರ್ಬೇಕಲ್ವ.. ಅದಕ್ಕೇಂತ ಇವತ್ತು ಒಂದು ಅರ್ಜಿ ಸಲ್ಲಿಸಿದ್ರೆ, ಅದರ ವಿಚಾರಣೆ ಆಗಿ, ಸಾಕ್ಷ್ಯಾಧಾರಗಳ ಪರಿಶೀಲನೆ, ಮರುಪರಿಶೀಲನೆ, ವಿಚಾರಣೆ, ಮರುವಿಚಾರಣೆಗಳೆಲ್ಲ ಆಗಿ ಕೊನೆಗೊಂದು ನಿರ್ಧಾರಕ್ಕೆ ಬರೋವಾಗ ನಮ್ಮ ಮೊಮ್ಮಕ್ಕಳ ಕಾಲವಾದೀತೇನೊ...!

ಅಂತೂ ಭೋಪಾಲ್ ಅನಿಲ ದುರಂತದಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿಯಿರಲಿ ಒಂದು ನಿಡಿದಾದ ಉಸಿರೂ ಬಂದಿರಲಿಕ್ಕಿಲ್ಲ.