13 January 2011

ಪುಟ್ಟಬಾಲೆಯ ಬಲಿಗೆ ಯಾವ ದೈವವದು ಒಲಿದೀತು?



ಹೇಳಿಕೇಳಿ ಇನ್ನೂ ಮೂರರ ಹರೆಯ. ಈ ಕ್ರೂರ ಪ್ರಪಂಚ ಏನು ಅಂತ ತಿಳಿಯೋ ಮೊದ್ಲೇ ಆ ಪುಟ್ಟ ಜೀವ ಇಹ ಲೋಕದ ಪ್ರಯಾಣ ಮುಗಿಸಿಯಾಗಿತ್ತು. ಆ ಎಳೆದೇಹ ಕಲ್ಲುಮುಳ್ಳುಗಳ ನಡುವೆ 'ಮೃತದೇಹ'ವಾಗಿ ಬಿದ್ದಿರೋದನ್ನು ನೋಡಿದ್ರೆ ಎಂಥವರಿಗೂ ಕಣ್ಣಲ್ಲಿ ನೀರು ಬಂದೀತು. ಕಂದನ ತುಂಟತನವನ್ನು, ಬಾಲಿಶ-ಚುರುಕು ಮಾತುಗಳನ್ನು ಕೇಳುತ್ತ ಖುಷಿ ಪಡ್ತಾ ಇದ್ದ ಅದರ ಅಪ್ಪ-ಅಮ್ಮನ ವೇದನೆಯದು ಅನಂತ. ನಿಷ್ಕಾರಣವಾಗಿ ಒಂದು ಮುಗ್ಧಜೀವ ಬಲಿಯಾಗಿ ಹೋಯ್ತಂದ್ರೆ ಯಾರಿಗೆ ತಾನೆ ದುಃಖವಾಗ್ಲಿಕ್ಕಿಲ್ಲ... ಆ ಪುಟಾಣಿ ಜೀವವನ್ನು ಬಲಿತಗೊಂಡು ಒಲಿಯುವ ಮನಸ್ಸು ಯಾವ ದೈವಕ್ಕೂ ಇರ್ಲಿಕ್ಕಿಲ್ಲ...


ಹೌದು ನಾನು ಹೇಳ್ತಾ ಇರೋದು, ಮೊನ್ನೆ ತಾನೆ ನಮ್ಮ ಮಂಗಳೂರಿನಲ್ಲಿ ವಾಮಾಚಾರದ ಭೂತಕ್ಕೆ 'ಬಲಿ'ಯಾದ ಪ್ರಿಯಾಂಕಾಳ ಬಗ್ಗೆ. ಒಂದು ದಿನ ಪೂರ್ತಿ 'ಬ್ರೇಕಿಂಗ್ ನ್ಯೂಸ್' ಆಗಿ ಮಾಧ್ಯಮಗಳಲ್ಲಿ ಬಿತ್ತರವಾದ ಆ ಸುದ್ದಿಯದ್ದು ಆಮೇಲೆ ಸುದ್ದಿಯೇ ಇಲ್ಲ. ಆಳುವ, ಕಾಯುವ ನಾಯಕರಿಗೆಲ್ಲ ಚುನಾವಣೆಯ ಬಿಸಿ. ಆ ಕುರಿತಾದ 'ಗಾಸಿಪ್'ಗಳಿಗೆ ಪ್ರಚಾರ ಕೊಡುವ ಭರಾಟೆಯಲ್ಲಿ ಮಾಧ್ಯಮಗಳಿಗೂ ಪುರುಸೊತ್ತಿಲ್ಲ.

ದೂರದ ಬಿಹಾರದಿಂದ ಇಲ್ಲಿ ಬಂದು ನೆಲೆಸಿದ ಆ ಕುಟುಂಬಕ್ಕೆ ನಮ್ಮ ಬಗ್ಗೆ ಎಂಥಾ ಕೆಟ್ಟ ಭಾವನೆ ಬಂದಿರ್ಬಹುದಲ್ಲ.. ನಮ್ಮೂರಿನ ಬಗೆಗಿನ ಆ ಕಪ್ಪು ಚುಕ್ಕೆ ಇನ್ನೆಂದೂ ಹೋಗ್ಲಿಕ್ಕಿಲ್ಲ.

ವಿಜ್ಞಾನ-ತಂತ್ರಜ್ಞಾನದಲ್ಲಿ ತೀವ್ರ ಪ್ರಗತಿ ಕಾಣ್ತಾ ಇರೋ ಈ ಹೈಟೆಕ್ ಶತಮಾನದಲ್ಲೂ ವಾಮಾಚಾರ, ನರಬಲಿ ಎಲ್ಲ ನಡೀತಿದೆ ಅಂದ್ರೆ ಏನರ್ಥ? ನಮ್ಮ ಮೂಲ ನಂಬಿಕೆಗಳ ಅರ್ಥವನ್ನು ಅನರ್ಥ ಮಾಡಿ ಮೂಢ ಆಚರಣೆಗಳನ್ನು ಈಗಲೂ ಪಾಲಿಸುವವ್ರಿಗೆ ಏನು ಹೇಳೋಣ? ಇನ್ನೂ ಚಿಗುರುತ್ತಿರೋ ಆ ಎಳೆ ಕುಡಿಯನ್ನು ಕೊಂದು ಹಾಕಿದ ಆ ವಿಕೃತ ಮನಸ್ಸು ಅದೆಷ್ಟು ಕಟುಕವಾಗಿರ್ಬಹುದಲ್ಲ..? ನಿಜವಾಗಿ ನೋಡಿದ್ರೆ, ಅವನಿಗೆ ನೇಣು ಶಿಕ್ಷೆಯೂ ಸಾಲದು! ಅವನೋ ಮುದುಕ. ನಮ್ಮ ನ್ಯಾಯಾಧಿಕರಣದಲ್ಲಿ ವಿಚಾರಣೆ-ವಿವರಣೆಗಳೆಲ್ಲ ಮುಗಿದು ತೀರ್ಪು ಬರುವ ಹೊತ್ತಿಗೆ ಆತ ಖಂಡಿತಾ ಪ್ರಾಕೃತಿಕವಾಗಿಯೇ ಸತ್ತು ಹೋಗಿರ್ತಾನೆ. ಮತ್ತೆಲ್ಲಿಯ ಶಿಕ್ಷೆ ಹೇಳಿ...

ತಪ್ಪಿತಸ್ಥ ಸಿಕ್ಕಿಹಾಕಿಕೊಂಡ ಮೇಲೆ ಅವರಿವರನ್ನೆಲ್ಲ ಕೊಲೆಯ ಭಾಗಿಗಳಾಗಿ ಮಾಡಹೊರಟ. ಆಸ್ತಿವಿವಾದವೋ ಮತ್ತೊಂದೋ ಕಾರಣಗಳು ಹಲವು. ಅಂತೂ ಎಳೆಚಿಗುರೊಂದು ಕಮರಿಹೋದದ್ದಂತೂ ಸತ್ಯ. ಅದನ್ನು ಕಣ್ಣಾರೆ ಕಂಡು ನಾವೆಲ್ಲ ಕೈಕಟ್ಟಿ ಕುಳಿತಿರ್ಬೇಕಾಗಿರೋದೂ ಅಷ್ಟೇ ಸತ್ಯ!