01 December 2009

ನಿರೀಕ್ಷೆ - ನಿರಾಸೆಸ್ನೇಹಿತ್ರೆ, ಬಹಳಷ್ಟು ಬಾರಿ ಹೀಗಾಗುವುದಿದೆ. ಹಂಬಲಿಸಿ, ಹಂಬಲಿಸಿ ಇನ್ನೇನು ನಮ್ಮ ಕೈಗೆ ಸಿಕ್ಕೇ ಬಿಟ್ಟಿತು ಅಂದಾಗ, ಅದೆಲ್ಲಿಂದಲೋ ಬರಸಿಡಿಲೆರಗಿ ಅದನ್ನು ನಮ್ಮಿಂದ ದೂರ, ದೂರ ಮತ್ತೆ ಬರದಷ್ಟು 'ದೂರ'ದತ್ತ ದೂರಮಾಡಿಬಿಡುತ್ತದೆ. ಯಾಕೆ ಹಾಗಾಗುತ್ತೆ? "ಛೆ, ನನ್ಗೇ ಹೀಗಾಗ್ಬೇಕಾ?" ಅಂತನ್ನುವ ವೇದನೆ. ವಾಸ್ತವ ಅಂದ್ರೆ, ಆ ರೀತಿ ಆದವರು, ಅಂದುಕೊಂಡವರು ಬಹಳಷ್ಟು ಜನ ಇರ್ತಾರೆ. ನಮ್ಮ ಗಮನಕ್ಕೆ ಬಂದಿರೊಲ್ಲ ಅಷ್ಟೆ. ನಮ್ಗೆ ಮಾತ್ರ ಹೀಗಾಗಿದೆ ಅಂತಂದ್ಕೊಳ್ತೇವೆ.


ಆದ್ರೂ ಅಂಥ ಒಂದು ನೋವು ಮನಸ್ಸಿಗೆ ತೀರಾ ನಾಟುವಂಥದ್ದು, ಅಲ್ವ? ದೈಹಿಕ ಗಾಯಗಳು ಹೇಗೋ ವಾಸಿಯಾದಾವು, ಆದ್ರೆ ಮಾನಸಿಕವಾಗಿ ಘಾಸಿಯಾದದ್ದು. . .?

ಏನೋ ಒಂದು 'ಮ್ಯಾಜಿಕ್' ನಡೀಬಹುದೇನೊ. . . ಬಯಸಿದ್ದ ನಿರೀಕ್ಷೆಗಳು ಮತ್ತೆ ಎದ್ದು ಬರದಂತೆ ಸತ್ತು ಬಿದ್ದಿದ್ರೂ, ಮಾಯೆಯಿಂದ ಮೆಲ್ಲನೆ ಚಿಗುರಿ ಬಂದು ಮನಸ್ಸಿಗೆ ಮುದ ನೀಡೀತೇನೋ... - ಎಂದೆಲ್ಲ ಹುಚ್ಚು ಯೋಚನೆಗಳು. ಅದೆಲ್ಲ ಅಸಾಧ್ಯವೆಂದರಿವಿದ್ದರೂ, ಆ ರೀತಿಯ ಕಲ್ಪನೆಗಳೇ ಒಂದು ರೀತಿ ಮುದ ನೀಡುತ್ತವೆ. ಅವುಗಳ ಆಧಾರದಲ್ಲೇ ಬದುಕು ಸವೆಯುತ್ತದೆ, ಸಾವಕಾಶವಾಗಿ.

ಸ್ನೇಹಿತ್ರೆ ಒಮ್ಮೆ ಯೋಚ್ನೆ ಮಾಡಿ, ಯಾಕಾಗುತ್ತೆ ಇಂಥ ನಿರಾಸೆಗಳು..? ಏನನ್ನೋ ತುಂಬಾ ನಿರೀಕ್ಷಿಸಿದ್ವಿ. ಅದು ಆಗ್ಲಿಲ್ಲ ಅಂತ ತಾನೆ? ಹೌದು, ನಿರಾಸೆಗೆ ಕಾರಣ ನಮ್ಮ ನಿರೀಕ್ಷೆ. ನಮ್ಮ expectation ಜಾಸ್ತಿ ಆದ ಹಾಗೆ ನಿರಾಸೆಗಳೂ ಜಾಸ್ತಿಯಾಗ್ತವೆ. ಜೀವನದಲ್ಲಿ ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಕಲಿಯುವ ದೊಡ್ಡ ಪಾಠ- ನಿರೀಕ್ಷೆಯೇ ನಿರಾಸೆಯ ಮೂಲ ಅಂತ. ಹಾಗಂತ ಏನನ್ನೂ ನಿರೀಕ್ಷಿಸದೇ ಹೇಗೆ ಜೀವನ ನಡೆಸೋದು? ಯಾವ್ದೇ ಕೆಲ್ಸ ಆದ್ರೂ ಒಂದು ನಿರೀಕ್ಷೆ ಇಲ್ದಿದ್ರೆ ಅದನ್ನು ಮಾಡೋದಕ್ಕೆ ಮನಸ್ಸು ಬರುತ್ತಾ? - ಅಂತೆಲ್ಲ ಪ್ರಶ್ನೆಗಳು ಮೂಡ್ಬಹುದು. ಒಂದು ಅಂಶ ನಾವು ಗಮನಿಸ್ಬೇಕಾದ್ದು, ಏನಂದ್ರೆ, ಈ ನಿರೀಕ್ಷೆ ಬೇರೆ, ಆಕಾಂಕ್ಷೆ ಬೇರೆ. ನಮ್ಗೆ ಯಶಸ್ಸು ಸಿಗ್ಬೇಕಂದ್ರೆ ನಾವೊಂದು ಮಹತ್ವಾಕಾಂಕ್ಷೆ ಹೊಂದಿರ್ಬೇಕು. ಅದಿದ್ದಾಗ ಕೆಲ್ಸ ಮಾಡೋ ಉತ್ಸಾಹ ತನ್ನಿಂತಾನೇ ಬಂದ್ಬಿಡುತ್ತೆ. ಮಹತ್ವಾಕಾಂಕ್ಷೆಯನ್ನು ಈಡೇರ್ಸಿಕೊಳ್ಳೋದು ನಮ್ಮ ಕೈಯಲ್ಲೇ ಇದೆ. ಆದ್ರೆ 'ನಿರೀಕ್ಷೆ' ಅನ್ನೋದು ಹಾಗಲ್ಲ. ಇನ್ನೊಬ್ಬರಿಂದ ಬರೋಂಥದ್ದನ್ನು ನಾವು ನಿರೀಕ್ಷೆ ಮಾಡೋದು ಅಷ್ಟೆ. ಏನೋ ಒಂದು ಅನಿರೀಕ್ಷಿತವಾಗಿ ಆಯ್ತು ಅಂದ್ರೆ ಅದ್ರಲ್ಲಿ ಸಿಗೋ ಖುಷಿ ಮತ್ತೆಲ್ಲೂ ಸಿಗೊಲ್ಲ ಅಲ್ವ. ವಿಪರ್ಯಾಸ ಏನಂದ್ರೆ ನಾವು ಆ ಅನಿರೀಕ್ಷಿತವನ್ನೇ ನಿರೀಕ್ಷೆ ಮಾಡ್ತೇವೆ.

ಮಾನಸಿಕ ಸಂಘರ್ಷಗಳಿಗೆ ಕೊನೆಯಿಲ್ಲ, ಉಸಿರಿರುವವರೆಗೆ.

1 comment:

 1. <<
  ನಿರಾಸೆಗೆ ಕಾರಣ ನಮ್ಮ ನಿರೀಕ್ಷೆ..
  >>
  ಸತ್ಯವಾದ ಮಾತು!
  ಒಳ್ಳೆಯ ಲೇಖನ, ಒಳ್ಳೆಯ ಚೌಕಟ್ಟು!!
  Nice blogging..!

  ReplyDelete