11 January 2010

ಸಂಬಂಧಗಳು...



ಈ ಸಂಬಂಧಗಳು ಅದೆಷ್ಟು ಸೂಕ್ಷ್ಮ!  ಸಣ್ಣ ರೇಷ್ಮೆ ಎಳೆಯಂತೆ.  ಒಂದೊಂದು ಎಳೆಯೂ ಅಷ್ಟೇ ಪ್ರಮುಖವೆನಿಸುತ್ತದೆ.  ಎಲ್ಲವೂ ಜೊತೆಸೇರಿ ಜೀವನದ ಹಂದರ ತಾನೆ?  ಬಿಗಿಯಾದರೆ ಅದೊಂದು ರೀತಿಯ ಚಡಪಡಿಕೆ.  ಇನ್ನು, ಸಡಿಲವಾಗಿ ಒಂದು ಎಳೆ ಕಡಿದು ಹೋದರೂ ಬಾಳೇ ನಶ್ವರವೇನೋ ಎಂಬ ಭಾವ.

ಸಂಬಂಧದ ಬಳ್ಳಿ ಕೇವಲ ಹುಟ್ಟಿನಿಂದ ಸುತ್ತಿಕೊಂಡು ಬಂದದ್ದು ಮಾತ್ರವಲ್ಲ.  ಜೀವನದ ಹಲವು ಹಂತಗಳಲ್ಲಿ ಬೆಸೆದುಕೊಂಡದ್ದೂ ಇರಬಹುದು.  ಕೆಲವೊಂದು ಬಾರಿ ರಕ್ತಸಂಬಂಧಿಗಳಲ್ಲಿರದಷ್ಟು ಪ್ರೀತಿ, ಮಮಕಾರ ಈ ಬಂಧುಗಳಲ್ಲಿ ಹೊಸೆದುಕೊಂಡಿರುತ್ತದೆ.  ಅವರೊಂದಿಗಿನ ಒಡನಾಟ ಒಡಹುಟ್ಟಿದವರಿಗಿಂತಲೂ ಹೆಚ್ಚು ಆತ್ಮೀಯತೆಯಿಂದಿರುತ್ತದೆ.  ಹೀಗಿರುವಾಗ, ಒಂದು ಸಣ್ಣ ವೈಮನಸ್ಸು ಮೂಡಿಬಿಟ್ಟರೆ, ಬದುಕನ್ನೇ ಕೊಚ್ಚಿಕೊಂಡು ಹೋಗುವಂಥ ದುಃಖ ಉಕ್ಕುಕ್ಕಿ ಬರುತ್ತದೆ.  ಅಂಥ ಸೆಳೆತವಿರುತ್ತದೆ ಅಲ್ಲಿ.

ಸಂಬಂಧಗಳನ್ನು ಮೊದಲಿನಿಂದ ಕೊನೆವರೆಗೂ ಜೋಪಾನವಾಗಿ, ಹಾಳಾಗದಂತೆ ನೋಡಿಕೊಳ್ಳುವುದೂ ಒಂದು ಕಲೆ.  ನೆಮ್ಮದಿಯ ಜೀವನಕ್ಕೆ ಅತೀ ಅಗತ್ಯವದು.  ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.  ಅಣ್ಣನೊಂದಿಗಿನ ಬಾಂಧವ್ಯ, ತಮ್ಮನಿಗೆ ಬೇಸರ ತರಿಸುವಂತಿರಬಾರದು.  ನಮಗೆ ಎಲ್ಲರೂ ಬೇಕು ತಾನೆ?  ಹಾಗೆಯೇ ಅವರಿಗೂ ಕೂಡ.  ನಮ್ಮ ಒಂದು ಅನುಬಂಧ, ಇನ್ನೊಂದರ ಮನನೋಯಿಸುವಂತಿರಬಾರದು.  ಅವರು ನಮ್ಮ ಬಗ್ಗೆ ಗಮನಕೊಡದೇ ಇದ್ದಾಗ ನಮಗದೆಷ್ಟು ಬೇಸರವುಂಟಾಗುವುದೋ, ಅಷ್ಟೇ ಬೇಸರ ನಮ್ಮ ವೈಮನಸ್ಸಿನಿಂದಾಗಿ ಅವರಿಗೂ ಆದೀತು.  ಅವರು ನಮ್ಮವರು, ನಮ್ಮಂತೆಯೇ ಎಂಬ ಭಾವನೆ ನಮ್ಮಲ್ಲಿರಬೇಕು.  ಅದಕ್ಕೆ ತಕ್ಕಂತೆ ನಡೆದುಕೊಳ್ಳಲೂಬೇಕು.
ಇನ್ನೊಬ್ಬರಿಂದ ತಪ್ಪಾದಾಗ, ಮುನಿಸಿಕೊಂಡು ಮಾತುಬಿಟ್ಟು ಕೂತರೆ ಅದರಿಂದ ನಮಗೇ ತಾನೆ ನಷ್ಟ?  ಅವರೇ ಬಂದು ಕ್ಷಮೆ ಕೇಳಲಿ. . . ಎಂದು ಅಹಂ ಭಾವದಿಂದ ವರ್ತಿಸುವುದು ಮತ್ತೂ ದೊಡ್ಡ ತಪ್ಪೆನಿಸುವುದು.  ಒಂದು ಮಂದಹಾಸ ಬೀರುತ್ತಾ, ಪ್ರೀತಿಯಿಂದ, ಏನಾದರೂ ಸಮಸ್ಯೆ ಇದೆಯಾ. . . . ಅಂತೊಂದು ಮಾತು ಕೇಳಿದರೆ ಸಾಕು.  ಇನ್ನೇನು ಕೊನೆಗಾಣುವ ಸ್ಥಿತಿಯಲ್ಲಿದ್ದ ಸಂಬಂಧ, ಚಿಗುರಿಕೊಂಡು ಮತ್ತಷ್ಟು ಗಾಢವಾಗಿಬಿಡುತ್ತದೆ.  ಒಟ್ಟಿನಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಅಥವಾ ಅಳಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

4 comments:

  1. ನಮಸ್ಕಾರ,
    ನಿಮ್ಮ ಬರಹ ಓದಿದೆ. ವಸ್ತು, ವಿಷಯಮಂಡನೆ, ಭಾಷೆಯ ಮೇಲಿನ ನಿಮ್ಮ ಹಿಡಿತ, ಓದುತ್ತಿದ್ದರೆ ಓದಿಸಿಕೊಳ್ಳುತ್ತಾ ಹೋಗುವ ನಿಮ್ಮ ಬರವಣಿಗೆಯ ಧಾಟಿ ಇಷ್ಟವಾಯಿತು.

    ಧನ್ಯವಾದ.

    ಕೃಷ್ಣ.

    ReplyDelete
  2. chenda iddu prayatna..vinutana.. hatsoff..nirantara ninna kaleya munduvaresikondu hogu..

    ReplyDelete
  3. ಹೆಲೋ ಅನು,
    ಸಂಬಂದಗಳ ಬಗೆಗಿನ ಬರಹ ತುಂಬ ಚೆನ್ನಾಗಿ ಇದೆ.... real fact ,,,,ಅಹಂ ನಮ್ಮಲ್ಲಿ ಎಲ್ಲಿವರೆವಿಗು ಇರುತ್ತೋ ಅಲ್ಲಿ ವರೆವಿಗೂ ಸಂಬಂದ ದಲ್ಲಿ ಸಿಹಿ ಇರೋಲ್ಲ..... ಒಳ್ಳೆಯ ಅರ್ಥ ಪೂರ್ಣ ಬರಹಕ್ಕಾಗಿ ಅಭಿನಂದನೆಗಳು.... ಹಾಗೇನೆ ನಿಮ್ಮ ಬ್ಲಾಗಿನ voice concept ಕೂಡ ತುಂಬ ವಿಭಿನ್ನವಾಗಿ ಇದೆ.... very interesting ,,,, ಇದು ನಿಮ್ಮದೇ ವಾಯ್ಸ್ ತಾನೆ? ತುಂಬ ಚೆನ್ನಾಗಿ ಇದೆ,,, ಮುಂದುವರಿಸಿ.....
    ಬಿಡುವಿದ್ದಾಗ ನನ್ನ ಬ್ಲಾಗಿನ ಕಡೆಗೂ ಬಂದು ಹೋಗಿ....
    ಗುರು

    ReplyDelete
  4. @ all
    ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೂ ಹೀಗೇ ಸಿಗ್ತಾ ಇರ್ಲಿ.

    ReplyDelete