16 February 2010

ಜೀವವೆಂಬುಡುಗೊರೆ....



ನಾವೆಲ್ಲ ನಮ್ ಸ್ನೇಹಿತ್ರು, ಬಂಧುಗಳು, ಆತ್ಮೀಯರು ಕೊಟ್ಟ ಉಡುಗೊರೆಗಳನ್ನು ಎಷ್ಟು ಜೋಪಾನವಾಗಿ ಎತ್ತಿಡ್ತೇವೆ! ಅವರೊಂದಿಗಿನ ಸವಿಸವಿನೆನಪುಗಳು ಆ ವಸ್ತುಗಳಿಗೊಂದು ವಿಶೇಷ ಸ್ಥಾನ ನೀಡಿರ್ತವೆ. ಕೆಲವನ್ನಂತೂ ತೀರಾ ಹಚ್ಕೊಂಡಿರ್ತೇವೆ. ಅದು ಎಲ್ಲಾದ್ರೂ ಕಳೆದು ಹೋದ್ರೆ ಏನೋ ಒಂಥರಾ ಕಸಿವಿಸಿ, ಚಡಪಡಿಕೆ. ಛೆ ಕಳ್ಕೊಂಡುಬಿಟ್ನಲ್ಲಾ ಅಂತ ಬೇಜಾರು. ಆ ವಸ್ತುವಿಗೆ ಅಂಥಾ ಬೆಲೆಯೇನೂ ಇಲ್ದಿದ್ರೂ ಅದು ಬೆಲೆಕಟ್ಟಲಾಗದ್ದಾಗಿರುತ್ತೆ. ನಿಜಾರ್ಥದಲ್ಲಿ ನೋಡಿದ್ರೆ ಅದೊಂದು ಕ್ಷುಲ್ಲಕ ವಿಚಾರ. ಆದ್ರೆ ಅಷ್ಟಕ್ಕೇ ಎಷ್ಟು ತಲೆಕೆಡಿಸಿಕೊಂಡುಬಿಡ್ತೇವಲ್ಲ...

ಸ್ನೇಹಿತ್ರೆ, ಲಕ್ಷ ಲಕ್ಷ ಜೀವಕೋಶಗಳ ವಿಶಿಷ್ಟ ಸಂಯೋಜನೆಯ ಈ ನಮ್ಮ ದೇಹ, ಅದರೊಳಗಿನ 'ಜೀವ' ನಿಜಕ್ಕೂ ನಮ್ಗೆ ದೊರೆತ ಅತ್ಯಂತ ದೊಡ್ಡ ಉಡುಗೊರೆ ಅಲ್ವಾ... ಅಗೋಚರ, ಅದ್ಭುತ ಶಕ್ತಿಯಿತ್ತ ಅತ್ಯದ್ಭುತ ಉಡುಗೊರೆಯಿದು. ಜೀವವೇ ಇಲ್ಲದ ಸಣ್ಣ ಸಣ್ಣ ವಸ್ತುಗಳ ಬಗ್ಗೆ ನಾವು ಅಷ್ಟು ಕಾಳಜಿ ತೋರಿಸ್ತೇವಂದ್ರೆ ಈ 'ಜೀವ'ಕ್ಕೆ ಇನ್ನೆಷ್ಟು ತೋರಿಸ್ಬೇಡ... ಯಾವುದೋ ಒಂದು ಹಂತದಲ್ಲಿ  ಏನೋ ಒಂದು ಹತಾಶೆಗೆ, ದುಃಖಕ್ಕೆ ನೊಂದುಕೊಂಡು ಜೀವವನ್ನೇ ಕಳ್ಕೊಳ್ಳೋದು ಎಷ್ಟು ಸರಿ..? ಕಳೆದುಹೋದ ವಸ್ತುಗಳು ಮತ್ತೆ ಸಿಕ್ಕೀತು... ಅಥವಾ ಅಂಥದ್ದೇ ಇನ್ನೊಂದನ್ನು, ಕೊಟ್ಟವರಿಂದ್ಲೇ ಮತ್ತೆ ಪಡೀಬಹುದು. ಆದ್ರೆ ಈ ಜೀವ, ಜೀವನ.... ಊಹೂಂ ಖಂಡಿತ ಮತ್ತೆ ಬರೊಲ್ಲ...

ಪರೀಕ್ಷೆಯಲ್ಲಿ ಫೇಲಾದೆ, ನನ್ನ ಆತ್ಮೀಯರು ನನ್ನ ತೊರೆದ್ರು, ನಂಗೆ ಬೇಕಾದ್ದು ಸಿಗ್ಲಿಲ್ಲ, ನಂಗೆ ಯಾರೋ ಬೈದ್ರು, ಯಾವುದೋ ಒಂದು ಕೆಲ್ಸ ಹೋಯ್ತು, ಅವಮಾನ ಆಯ್ತು - ಹೀಗೆ ಇಂಥ ಸಣ್ಣಪುಟ್ಟ ವಿಚಾರಗಳಿಗೆ ಜೀವಕ್ಕೇ ಎರವನ್ನು ತಂದುಕೊಳ್ಳೋದು ಸರೀನಾ... ಛೆ, ನಮ್ಮ ಈ 'ಜೀವ' ಅಷ್ಟು cheap ಆಗ್ಬಿಡ್ತಾ...? ಇಷ್ಟು ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡ್ಕೊಳ್ಳೋದಂದ್ರೆ ಈ ಆತ್ಮಕ್ಕೆ, ಈ ಜೀವಕ್ಕೆ ಏನೇನೂ ಬೆಲೆ ಇಲ್ಲ ಅಂದ ಹಾಗಾಯ್ತಲ್ಲ...

"ಸಾಕಾಗಿ ಹೋಯ್ತು...ಈ ಜೀವನವೇ ಬೇಡ" ಅಂತನ್ನಿಸೋ ಕ್ಷಣಗಳು ನೂರಾರು ಬರ್ಬಹುದು. ಆದ್ರೆ ಅದು ಕ್ಷಣಿಕ ಮಾತ್ರ. ಮರುದಿನ ಮತ್ತೊಂದು ಜೀವನಪ್ರೀತಿ ಮೊಳಕೆ ಒಡೆಯುತ್ತೆ. ಅಲ್ಲಿವರೆಗೆ ಜೀವಹಿಡಿದು ಕೂತ್ರೆ ಅಷ್ಟು ಸಾಕು. ಆಮೇಲೆ, "ಛೆ, ಎಂಥಾ ಕೆಟ್ಟ ಯೋಚ್ನೆ ಮಾಡಿದ್ದೆ.." ಅಂತನ್ನಿಸುತ್ತೆ.

ಯೋಚ್ನೆ ಮಾಡಿ, ನಿಮ್ಮವರನ್ನೂ ಯೋಚ್ನೆಗೆ ಹಚ್ಚಿ. ಬೇರೆ ಯಾವ ಪ್ರಾಣಿಗೂ ಸಿಕ್ಕದ ಅತಿಶ್ರೇಷ್ಠ ಉಡುಗೊರೆ ನಮ್ಗೆ ಸಿಕ್ಕಿದೆ. ಇರುವವರೆಗೆ, ಗಮ್ಯ ಕರೆವವರೆಗೆ ಅದನ್ನು ಕಾಪಾಡಿಕೊಂಡು, ಅದಕ್ಕೆ ನಾವೇ ಎರವಾಗದ ಹಾಗೆ 'ಜೀವಿಸು'ವುದು ಖಂಡಿತವಾಗಿ ನಮ್ಮ ಕರ್ತವ್ಯ. ಅಲ್ವ...

7 comments:

  1. ಲೇಖನ ಚೆನ್ನಗಿದೆ.

    ReplyDelete
  2. ಬಹಳ ಮಾರ್ಮಿಕವಾಗಿದೆ. ಉಡುಗೊರೆ ವಸ್ತು, ಜೀವ ವಸ್ತು ಅಲ್ಲ ಅದು ದೇವರ ಕೃಪೆ.

    ReplyDelete
  3. ಜೀವ ಎನ್ನೋದು ಅದ್ಭುತ ಉಡುಗೊರೆ ಏನೋ ನಿಜ, ಆದರೆ ಅದಕ್ಕೆ
    ಒಂದು ಅವಧಿ ಇದೆ
    ಅದೇ ಸ್ಮಾರಕಗಳು, ಕಟ್ಟಡಗಳು ಇವನ್ನು ನಾವು ರಕ್ಷಿಸುತ್ತ ಹೋದರೆ ಅದೆಷ್ಟೋ ಶತಮಾನಗಳ ತನಕ ಸಂರಕ್ಷಿಸಬಹುದು ಅಲ್ವೇ?
    ಜೀವನವನ್ನು ಪ್ರೀತಿಸಬೇಕು ಆದರೆ ಜೀವವನ್ನು ಅಲ್ಲ ಅನ್ನೋದು ನನ್ನ ಅನಿಸಿಕೆ
    ಜೀವ ನಶ್ವರ ಆದರೆ ಜೀವನ ಶಾಶ್ವತ,
    ನೀವು ಏನಾದರೂ ಬದುಕಿರುವಷ್ಟು ಸಮಯದಲ್ಲಿ ಸಾದಿಸಿದರೆ ಅದು ನಿಮ್ಮ ಜೀವನದುದ್ದಕ್ಕೆ ಮಾತ್ರ ಅಲ್ಲ ಅನೇಕ ತಲೆಮಾರುಗಳ ತನಕ ಉಳಿಯುತ್ತದೆ

    ReplyDelete
  4. ಆತ್ಮಕ್ಕೆ ಹಿಂಸೆ ಕೊಡಲು ಹೊರಟವರಿಗೆ ಆತ್ಮ ಸ್ಥೈರ್ಯ ನೀಡುವನಂತ ಲೇಖನ.

    ReplyDelete
  5. ಬ್ಲಾಗ್.... ಒಂದು ಅದ್ಭುತ ಪ್ರಯತ್ನ. ಆದರೆ ನನ್ನದೊಂದು ಸಲಹೆ, ವೈಸ್ ಜೊತೆಗೆ ಅದನ್ನೇ ಮತ್ತೆ ಬರೆಯಬೇಕಾಗಿಲ್ಲ. ಬರೆಯ ಬೇಕೆಂದಿದ್ದರೂ ಕೆಲವು ಮುಖ್ಯಾಂಶಗಳನ್ನೂ ಬರೆದರೆ ಸಾಕಿತ್ತೇನೋ. ನಿಜಕ್ಕೂ ಸಾಕಷ್ಟು ಖುಷಿಯಾಯಿತು. ತಾವು ಹೇಗೆ ರೆಕಾರ್ಡ್ ಮಾಡ್ತಿರಾ? ದಯವಿಟ್ಟು ಆ ಬಗ್ಗೆ ತಿಳಿಸಿಕೊಡಿ. ವಿವರ ಮೇಲ್ ಮಾಡಲು ಸಾದ್ಯವೇ? ನನ್ನ ಮೇಲ್ ಐಡಿ - agnikp2006@yahoo.com/ ನನ್ನ ಬ್ಲಾಗ್ http://agniprapancha.blogspot.com.

    ReplyDelete
  6. ನಮಸ್ಕಾರ. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

    @ಜಿ.ಎಸ್.ಬಿ.ಅಗ್ನಿಹೋತ್ರಿ..
    ಬರೆಯುವ ಉದ್ದೇಶ ಏನೆಂದರೆ, ಕೆಲವರು ಇಂಟರ್‌ನೆಟ್ ಕೆಫೆಯಲ್ಲೊ, ಸೈಬರ್‌ನಲ್ಲೊ ನೋಡುವವರಿಗೆ ಕೇಳುವ ವ್ಯವಸ್ಥೆ ಇಲ್ಲದೇ ಇರಬಹುದು. ಆಗ ಅವರಿಗೆ ಬರಹವನ್ನು ಓದಬಹುದಲ್ಲಾ ಅಂತ. ತಮ್ಮ ಸಲಹೆಗೆ ಧನ್ಯವಾದಗಳು.
    ನಾನು ಬಹಳ ಸರಳ ವಿಧಾನದಲ್ಲೆ ರೆಕಾರ್ಡ್ ಮಾಡೋದು. ಮನೆಯಲ್ಲಿರೋ ಹೆಡ್‌ಫೋನ್‌ನಲ್ಲಿ ಮಾಡಿ, ಆಮೇಲೆ ಅದನ್ನು ಸ್ವಲ್ಪ ಎಡಿಟ್ ಮಾಡಿ, ಹಿನ್ನೆಲೆಯಲ್ಲಿ ಸಂಗೀತ ಸೇರಿಸೋದು ಅಷ್ಟೆ. ಆಡಿಯೊ ಎಡಿಟಿಂಗ್‌ನಲ್ಲಿ ಸ್ವಲ್ಪ ಮಟ್ಟಿನ ಪರಿಣತಿ ಇರೋದ್ರಿಂದ ಈ ಪ್ರಯತ್ನ ಮಾಡಹೊರಟೆ. ಹೇಗನ್ನಿಸ್ತು?

    ReplyDelete